ಚೆನ್ನೈ: ಟಿ20 ಸರಣಿಯಲ್ಲಿ ಭಾರತ ವಿರುದ್ಧ ಮೊದಲೆರಡು ಪಂದ್ಯಗಳಲ್ಲಿ ಸೋತಿರುವ ನಡುವೆಯೂ ಇಂಗ್ಲೆಂಡ್ ತಂಡದ ನಾಯಕ ಜಾಸ್ ಬಟ್ಲರ್ (Jos Buttler) ಅವರು ಎರಡು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಅವರು ಮೂರು ಸಿಕ್ಸರ್ ಬಾರಿಸಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 150 ಸಿಕ್ಸರ್ ಪೂರೈಸಿದ ಇಂಗ್ಲೆಂಡ್‌ನ ಮೊದಲ, ವಿಶ್ವದ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಬಟ್ಲರ್ ಸಿಕ್ಸರ್‌ಗಳ ಒಡೆಯ ಎಂಬುದನ್ನು ಸಾಬೀತುಮಾಡಿದ್ದಾರೆ.
ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ್ದ ಬಟ್ಲರ್ 3 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ 45 ರನ್ ಚಚ್ಚಿದ್ದರು. ಇದೇ ವೇಳೆ ಭಾರತ ವಿರುದ್ಧ ಟಿ20ಯಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಇನ್ನೊಂದು ದಾಖಲೆಯನ್ನು ತಮ್ಮೆಸರಿಗೆ ಬರೆಸಿಕೊಂಡರು. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್(592) ಈ ಸಾಧನೆ ಮಾಡಿದ್ದರು. ಇದೀಗ ಬಟ್ಲರ್ 611 ರನ್ ಬಾರಿಸಿದ್ದಾರೆ.
ರೋಹಿತ್ ದಾಖಲೆ
ಟಿ20 ಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ದಾಖಲೆ ಟೀಮ್ ಇಂಡಿಯಾದ ಮಾಜಿ ಆಟಗಾರ ರೋಹಿತ್ ಶರ್ಮ ಹೆಸರಿನಲ್ಲಿದೆ. 159 ಪಂದ್ಯಗಳನ್ನಾಡಿ 205 ಸಿಕ್ಸರ್ ಬಾರಿಸಿದ್ದಾರೆ. ಮಾರ್ಟಿನ್ ಗಪ್ಟಿಲ್(173), ಮುಹಮ್ಮದ್ ವಸೀಂ(158) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಭಾರತಕ್ಕೆ ಎರಡನೇ ಗೆಲುವು
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಸರಣಿಯ ಎರಡನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 166 ರನ್‌ಗಳ ಗುರಿ ಹಿಂಬಾಲಿಸಿದ ಭಾರತ ತಂಡ, ತಿಲಕ್ ವರ್ಮಾ ಅರ್ಧಶತಕದ ಬಲದಿಂದ 19.2 ಓವರ್‌ಗಳಿಗೆ ಗುರಿ ತಲುಪಿ ವಿಜಯೋತ್ಸವ ಆಚರಿಸಿತು.
ಸ್ಪರ್ಧಾತ್ಮಕ ಗುರಿ ಹಿಂಬಾಲಿಸಿದ ಭಾರತ ತಂಡದ ಪರ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಧ್ರುವ್ ಜುರೆಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ವಾಷಿಂಗ್ಟನ್ ಸುಂದರ್ 26 ರನ್‌ಗಳ ನಿರ್ಣಾಯಕ ಕೊಡುಗೆ ನೀಡಿ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಬ್ಯಾಟ್ ಮಾಡಿದ ತಿಲಕ್ ವರ್ಮಾ ಗೆಲುವು ತಂದುಕೊಟ್ಟರು.
ತಿಲಕ್ ನಿಯಂತ್ರಿಸಲು ಇಂಗ್ಲೆಂಡ್ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ. ಆಡಿದ 55 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 72 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಭಾರತ ತಂಡವನ್ನು ಕೊನೆಯ ಓವರ್‌ನಲ್ಲಿ ಗೆಲುವಿನ ದಡ ಸೇರಿಸಿದರು. 5 ಎಸೆತಗಳಲ್ಲಿ 9 ರನ್ ಗಳಿಸಿದ ರವಿ ಬಿಷ್ಣೋಯ್ ಕೂಡ ಭಾರತದ ಗೆಲುವಿನಲ್ಲಿ ಅಳಿವು ಸೇವೆ ಸಲ್ಲಿಸಿದರು. ಇಂಗ್ಲೆಂಡ್ ಪರ ಬ್ರೈಡೆನ್ ಕಾರ್ಸ್ 3 ವಿಕೆಟ್ ಕಿತ್ತರು.