ಯೋಗ ಗುರು ಬಾಬಾ ರಾಮದೇವ್(Baba Ramdev) ನೇತೃತ್ವದ ಪತಂಜಲಿ ಆಯುರ್ವೇದ ಗ್ರೂಪ್‌ನ ಪತಂಜಲಿ ಫುಡ್ಸ್ ಲಿಮಿಟೆಡ್ ಮಾರುಕಟ್ಟೆಗೆ ಬಿಟ್ಟಿದ್ದ ತನ್ನ 4 ಟನ್ ಮೆಣಸಿನ ಪುಡಿ ವಾಪಸ್ ಪಡೆದಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSI) ನಿಗದಿ ಮಾಡಿರುವ ಆಹಾರ ಸುರಕ್ಷತಾ ನಿಯಮಗಳನ್ನು ಅನುಸರಿಸದ ಕಾರಣ ಖಾರ ಪುಡಿಯನ್ನು ವಾಪಸ್ ಪಡೆಯುವಂತಾಗಿದೆ. ಈ ನಡುವೆ ಕಂಪನಿಯು ಪುಡಿಯನ್ನು ಈಗಾಗಲೇ ಖರೀದಿಸಿದ್ದ ಗ್ರಾಹಕರು ಅಂಗಡಿಗೆ ವಾಪಸ್ ಕೊಟ್ಟು ದುಡ್ಡು ಪಡೆದುಕೊಳ್ಳುವಂತೆ ಸಲಹೆ ನೀಡಿದೆ.
AJD2400012 ಬ್ಯಾಚ್ ಸಂಖ್ಯೆಯ ಮೆಣಸಿನ ಪುಡಿಯನ್ನು ಮಾರುಕಟ್ಟೆಗೆ ಇಳಿಸುವಾಗ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾಲಿನ್ಯಕಾರಕಗಳ ಮತ್ತು ಕೀಟನಾಶಕಗಳ ಉಳಿಕೆ ಪ್ರಮಾಣ) ನಿಯಮಗಳು, 2011 ಅನುಸರಿಸಿಲ್ಲ. ಹೀಗಾಗಿ ಆ ಬ್ಯಾಚ್‌ನ ಪ್ಯಾಕ್ಡ್ ಖಾರದ ಪುಡಿಯನ್ನು ವಾಪಸ್ ಪಡೆಯಲು ಎಫ್‌ಎಸ್‌ಎಸ್‌ಐ ನಿರ್ದೇಶನ ನೀಡಿದೆ ಎಂಬುದಾಗಿ ಪತಂಜಲಿ ಫುಡ್ಸ್ ಜನವರಿ 24 ರ ಶುಕ್ರವಾರ ಎಕ್ಸ್‌ಚೇಂಜ್ ಫೈಲಿಂಗ್‌ಗೆ (ಷೇರು ಮಾರುಕಟ್ಟೆಗೆ) ಮಾಹಿತಿ ನೀಡಿದೆ.
“ಪತಂಜಲಿ ಫುಡ್ಸ್ ನಾಲ್ಕು ಟನ್ ಕೆಂಪು ಮೆಣಸಿನ ಪುಡಿ 200 ಗ್ರಾಂ ಪ್ಯಾಕ್‌ಗಳ ಸಣ್ಣ ಬ್ಯಾಚ್ ಹಿಂತೆಗೆದುಕೊಂಡಿದೆ” ಎಂದು ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್ ಅಸ್ತಾನಾ ಅಧಿಕೃತ ಹೇಳಿಕೆಯಲ್ಲಿಯೂ ತಿಳಿಸಿದ್ದಾರೆ.
ಅಸ್ತಾನಾ ಅವರ ಪ್ರಕಾರ, ಖಾರ ಪುಡಿಯ ಸ್ಯಾಂಪಲ್‌ಗಳನ್ನು ಪರೀಕ್ಷಿಸಿದಾಗ, “ಕೀಟನಾಶಕ ಉಳಿಕೆಗೆ ನೀಡಲಾದ ಗರಿಷ್ಠ ಮಿತಿ ಪಾಲಿಸಿಲ್ಲ “ಎಂಬುದು ಪತ್ತೆಯಾಗಿದೆ. ಖಾರದ ಪುಡಿ ಸೇರಿದಂತೆ ಎಲ್ಲ ಬಗೆಯ ಆಹಾರ ಪದಾರ್ಥಗಳಲ್ಲಿ ಇರಬಹುದಾದ ಕೀಟನಾಶಕಗಳಿಗೆ ಎಫ್ಎಸ್ಎಸ್ಎಐ ಗರಿಷ್ಠ ಶೇಷ ಮಿತಿಗಳನ್ನು ನಿಗದಿಪಡಿಸಿದೆ. ಅದು ತಪ್ಪಿದರೆ ಸೇವನೆಗೆ ಯೋಗ್ಯವಲ್ಲ ಎಂದು ಪರಿಗಣಿಸಲಾಗುತ್ತದೆ. ಅಂತೆಯೇ ಬಾಬಾ ರಾಮ್‌ದೇವ್ ಅವರ ಉತ್ಪನ್ನವೂ ತಿನ್ನಲು ಯೋಗ್ಯವಲ್ಲ ಎಂಬುದಾಗಿ ಎಫ್‌ಎಸ್‌ಎಸ್‌ಐ ನಿರ್ದೇಶನ ನೀಡಿದೆ.
ವಾಪಸ್ ಕೊಡಲು ಗ್ರಾಹಕರಿಗೆ ಮನವಿ
ಉತ್ಪನ್ನವನ್ನು ಖರೀದಿಸಿದ ಸ್ಥಳಕ್ಕೆ ಹಿಂದಿರುಗಿಸುವಂತೆ ಗ್ರಾಹಕರನ್ನು ಕೋರಿದ ಸಿಇಓ, ಸಂಪೂರ್ಣವಾಗಿ ಮರುಪಾವತಿ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಇದೇ ವೇಳೆ ಅವರು, ಹಿಂಪಡೆಯಲಾದ ಖಾರ ಪುಡಿಯ ಮೌಲ್ಯ ಸಣ್ಣ ಪ್ರಮಾಣದ್ದು” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಂಪನಿಯು ಈಗ, ಕೃಷಿ ಉತ್ಪನ್ನಗಳ ಪೂರೈಕೆದಾರರ ಮೌಲ್ಯಮಾಪನ ಮಾಡುತ್ತಿದೆ. ಸಂಪೂರ್ಣ ಎಫ್ಎಸ್ಎಸ್ಎಐ ನಿಯಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಕೃಷಿ ಉತ್ಪನ್ನಗಳ ಸಂಗ್ರಹಣೆ ವೇಳೆ ಕಠಿಣ ನಿಯಮಗಳನ್ನು ಅನುಸರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
“ಕಂಪನಿಯು ತನ್ನ ಎಲ್ಲಾ ಉತ್ಪನ್ನಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಮತ್ತು ಎಫ್‌ಎಸ್‌ಎಸ್‌ಐ ವಿಧಿಸಿರುವ ನಿಯಮಗಳನ್ನು ಪಾಲಿಸಲು ಬದ್ಧವಾಗಿದ್ದೇವೆ ” ಎಂದು ಸಿಇಒ ಹೇಳಿದರು.
ಪತಂಜಲಿ ಫುಡ್ಸ್ ಷೇರು ಮಾರುಕಟ್ಟೆ ವ್ಯಾಪ್ತಿ
ಪತಂಜಲಿ ಫುಡ್ಸ್ ಲಿಮಿಟೆಡ್ ಷೇರುಗಳು ಮೌಲ್ಯಗಳು ಶುಕ್ರವಾರ ಬಿಎಸ್ಇಯಲ್ಲಿ ಶೇಕಡಾ 1.95 ರಷ್ಟು ಕುಸಿದು 1,819.05 ರೂ.ಗೆ ತಲುಪಿದೆ.
ಬಿಎಸ್ಇ ಅಂಕಿಅಂಶಗಳ ಪ್ರಕಾರ, ಷೇರುಗಳು ಸೆಪ್ಟೆಂಬರ್ 4, 2024 ರಂದು 52 ವಾರಗಳ ಗರಿಷ್ಠ 2,030 ರೂ.ಗೆ ತಲುಪಿತ್ತು. ಜೂನ್ 4, 2024 ರಂದು 52 ವಾರಗಳ ಕನಿಷ್ಠ 1,170.10 ರೂಗಳಿಗೆ ಇಳಿಕೆಯಾಗಿತ್ತು. ಜನವರಿ 24, 2025 ರ ಹೊತ್ತಿಗೆ, ಪತಂಜಲಿ ಫುಡ್ಸ್‌ನ ಮಾರುಕಟ್ಟೆ ಬಂಡವಾಳ 65,848.67 ಕೋಟಿ ರೂಪಾಯಿಯಷ್ಟಿದೆ.