ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ನಲ್ಲಿ ಭಾರತೀಯ ವನಿತೆಯರ ತಂಡ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಕೇವಲ 118 ರನ್ ಗಳಿಸಿತ್ತು. ಸುಲಭ ಮೊತ್ತ ಗಳಿಸಿದರೂ ಶ್ರೀಲಂಕಾ ವಿರುದ್ಧ ಜಯ ಸಾಧಿಸಿದೆ. ಸುಲಭ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕೇವಲ 58 ರನ್ ಗಳಿಗೆ ಆಲೌಟ್ ಆಗಿ 60 ರನ್ ಗಳಿಂದ ಸೋಲು ಕಂಡಿದೆ.
ಆ ಮೂಲಕ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ ಗ್ರೂಪ್ ಎ ದಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಈ ಮೂಲಕ ಭಾರತ ತಂಡಕ್ಕೆ ಸೂಪರ್ 6 ಲೀಗ್ ಹಂತಕ್ಕೆ ಅರ್ಹತೆ ಸಿಕ್ಕಿದೆ. ಟೂರ್ನಿಯಲ್ಲಿ ಮೊದಲ ಸೋಲು ಕಂಡ ಶ್ರೀಲಂಕಾ ಕೂಡ ಸೂಪರ್ ಸಿಕ್ಸ್ಗೆ ಎಂಟ್ರಿ ಕೊಟ್ಟಿದೆ.
ಭಾರತ ತಂಡದ ಗೆಲುವಿನಲ್ಲಿ ಗೊಂಗಡಿ ತ್ರಿಷಾ ಪ್ರಮುಖ ಪಾತ್ರ ವಹಿಸಿದರು. 49 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಪರಿಣಾಮವಾಗಿ ತಂಡ 118 ರನ್ ಗಳಿಸಿಸಿದೆ. ತ್ರಿಷಾ ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್ಮನ್ 20 ರನ್ ಗಳನ್ನು ತಲುಪಲು ಸಾಧ್ಯವಾಗಲಿಲ್ಲ. ಶ್ರೀಲಂಕಾ ಪರ ಲಿಮಾನ್ಸಾ ತಿಲಕರತ್ನೆ ಮತ್ತು ಪ್ರಮುದಿ ಮೆತ್ಸಾರ ತಲಾ 2 ವಿಕೆಟ್ ಪಡೆದು ಮಿಂಚಿದರು.
ಶ್ರೀಲಂಕಾ ತಂಡ ಸುಲಭ ಗುರಿ ಬೆನ್ನಟ್ಟಲು ವಿಫಲವಾಗಿ ಭಾರತೀಯ ಬೌಲರ್ ಗಳಿಗೆ ಶರಣಾಗಿದ್ದಾರೆ. ಭಾರತೀಯ ಬೌಲರ್ಗಳು ತಮ್ಮ ಮಾರಕ ದಾಳಿಯೊಂದಿಗೆ ಲಂಕಾ ತಂಡವನ್ನು ಪೆವಿಲಿಯನ್ ಪರೇಡ್ ನಡೆಸುವಂತೆ ಮಾಡಿದರು. ಶಬ್ನಮ್ ಶಕೀಲ್ ಮತ್ತು ಜೋಶಿತಾ ಶ್ರೀಲಂಕಾಕ್ಕೆ ದೊಡ್ಡ ಪೆಟ್ಟು ನೀಡಿದರು. ಶಕೀಲ್ ಮತ್ತು ಜೋಶಿತಾ ಇಬ್ಬರೂ ತಲಾ 2 ವಿಕೆಟ್ ಪಡೆದರು. ಆಯುಷಿ ಶುಕ್ಲಾ ಒಂದು ವಿಕೆಟ್ ಪಡೆದರು. ಪರುಣಿಕಾ ಸಿಸೋಡಿಯಾ 2, ವೈಷ್ಣವಿ ಶರ್ಮಾ ಕೂಡ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಭಾರತ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್, ಎರಡನೇ ಪಂದ್ಯವನ್ನು ಮಲೇಷ್ಯಾ ಹಾಗೂ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದೆ.