ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ(Sri Rama Mandir) ನಿರ್ಮಾಣಗೊಂಡು ಜನವರಿ 22ಕ್ಕೆ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಒಂದು ವರ್ಷ ಪೂರ್ಣಗೊಂಡಿತು. ಈ ದಿನಾಂಕದಂದು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ,(Narendra Modi) ಸಿಎಂ ಯೋಗಿ ಆದಿತ್ಯನಾಥ್ ಅವರು ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಿದ್ದರು.
ವಿಶ್ವಾದ್ಯಂತ ಹಲವು ದೇಶಗಳಿಂದ ಆಗಮಿಸಿದ್ದ ಗಣ್ಯರ ಸಮ್ಮುಖದಲ್ಲಿ ರಾಮಲಲ್ಲಾನ ನೇತ್ರೋಲನ ಮಾಡಲಾಗಿತ್ತು. ಕೋಟ್ಯಂತರ ರಾಮ ಭಕ್ತರು ಭಕ್ತಿ ಮೆರೆದಿದ್ದರು.
ಸುದೀರ್ಘ ಹೋರಾಟದ ಪ್ರತಿಫಲವಾಗಿ ಮರ್ಯದಾ ಪುರುಷೋತ್ತಮ ಶ್ರೀರಾಮನ ಜನಸ್ಥಳವಾದ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯಾಗಿತ್ತು.
ಆದರೆ ಈ ವರ್ಷ ಜನವರಿ 11 ರಂದೇ ರಾಮಮಂದಿರ ಉದ್ಘಾಟನೆಯ ಪ್ರಥಮ ವಾರ್ಷಿಕೋತ್ಸವ ನೆರವೇರಿಸಲಾಯಿತು. ಅದಕ್ಕೆ ಕಾರಣವೂ ಇತ್ತು. ಹಿಂದೂ ಚಾಂದ್ರಮಾನ ಪಂಚಾಗದ ಆಧಾರದ ಮೇಲೆ ಕಳೆದ ವರ್ಷ ಕೂರ್ಮ ದ್ವಾದಶಿಯಂದು ಅಯೋಧ್ಯಾ(Ayodhya) ರಾಮಮಂದಿರವನ್ನು ಉದ್ಘಾಟಿಸಲಾಗಿತ್ತು. ಈ ವರ್ಷ ಜನವರಿ 11 ರಂದು ಅದೇ ತಿಥಿಯಂದು ವಾರ್ಷಿಕೋತ್ಸವ ಆಚರಿಸಲಾಯಿತು.
ರಾಮಲಲ್ಲಾ ದರ್ಶನಕ್ಕೆ ಈಗಾಗಲೇ ಭಾರತಾದ್ಯಂತ ಭಕ್ತರು ಬರುತ್ತಿದ್ದಾರೆ. ಇಡೀ ಅಯೋಧ್ಯೆಯು ಈಗ ಪ್ರಮುಖ ತೀರ್ಥಕ್ಷೇತ್ರವಾಗಿ ಮಾರ್ಪಟ್ಟಿದೆ. ಆದರೆ ಮಂದಿರ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ಈ ವರ್ಷ ಮಂದಿರ ನಿರ್ಮಾಣ ಕಾರ್ಯ ಮುಗಿಯುವ ನಿರೀಕ್ಷೆಯಿದೆ.