ಕೋಲ್ಕತಾ: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (Champions Trophy 2025) ಭಾರತ ತಂಡದಲ್ಲಿ ತನಗೆ ಸ್ಥಾನ ನೀಡದ ಬಿಸಿಸಿಐನ(BCCI) ನಿರ್ಧಾರವನ್ನು ಟಿ20ಐ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಯಾವುದೇ ಪ್ರತಿರೋಧ ಇಲ್ಲದೆ ಸ್ವೀಕರಿಸಿದ್ದಾರೆ. ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದ ಸಂದರ್ಭದಲ್ಲಿ ನನ್ನಿಂದ ಉತ್ತಮ ಪ್ರದರ್ಶನ ಮೂಡಿಬಂದಿರಲಿಲ್ಲ. ಆ ಬಗ್ಗೆ ನಿರಾಸೆಯಿದೆ. ಆದರೆ ಸ್ಥಾನದ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ.
ಪ್ರವಾಸಿ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸುವ ಸೂರ್ಯಕುಮಾರ್ ಏಕದಿನ ಮಾದರಿಯಲ್ಲ ಛಾಪು ಮೂಡಿಸಿಲ್ಲ. .ಒಡಿಐಗಳಲ್ಲಿ, ಅವರು 37 ಪಂದ್ಯಗಳಲ್ಲಿ 25.76 ರ ಸರಾಸರಿಯಲ್ಲಿ 773 ರನ್ ಗಳಿಸಿದ್ದಾರೆ. ಹೀಗಾಗಿ ಅವರಿಗೆ ಭಾರತ ಏಕ ದಿನ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ಆ ಬಗ್ಗೆ ಮಾತನಾಡಿದ ಅವರು, ಉತ್ತಮ ಪ್ರದರ್ಶನ ನೀಡದ ತಮ್ಮದೇ ತಪ್ಪು ಎಂದು ಹೇಳಿದ್ದಾರೆ.
ಬಿಸಿಸಿಐ ನಿರ್ಧಾರ ಸ್ವೀಕರಿಸಿದ್ದೇನೆ: ಸೂರ್ಯ
ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯ ಆರಂಭಿಕ ಪಂದ್ಯಕ್ಕೂ ಮುನ್ನ ದಿನ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಸಿಗದೆ ನಿರಾಶೆಗೊಂಡಿದ್ದೀರಾ ಎಂದು ಸೂರ್ಯಕುಮಾರ್ ಅವರನ್ನು ಕೇಳಿದಾಗ, ಅವರು “ಯಾರೇ ಆಗಲಿ ಏಕೆ ನಿರಾಶೆಗೊಳ್ಳುತ್ತಾರೆ? ನಾನು ಉತ್ತಮ ಪ್ರದರ್ಶನ ನೀಡಿದರೆ (ಒಡಿಐನಲ್ಲಿ) ನಾನು ತಂಡದಲ್ಲಿ ಸ್ಥಾನ ಪಡೆಯುತ್ತೇನೆ. ನಾನು ಚೆನ್ನಾಗಿ ಆಡದಿದ್ದರೆ ಇದು ಸಾಧ್ಯವಾಗುವುದಿಲ್ಲ. ಅದನ್ನು ಸ್ವೀಕರಿಸುವುದರಿಂದ ಯಾವುದೇ ಹಾನಿ ಇಲ್ಲ. ಅಲ್ಲದೆ, ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾದ ತಂಡವನ್ನು ನೋಡಿದರೆ, ಅದು ಅದ್ಭುತವಾಗಿದೆ. ಈ ತಂಡದಲ್ಲಿರುವವರು ಉತ್ತಮ ಪ್ರದರ್ಶನ ನೀಡುವ ಆಟಗಾರರು. ಅವರೆಲ್ಲರೂ ಈ ಸ್ವರೂಪದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಅವರಿಂದ ನನಗೆ ತುಂಬಾ ಸಂತೋಷವಾಗಿದೆ,” ಎಂದು ಹೇಳಿದ್ದಾರೆ.
ಉತ್ತಮ ಪ್ರದರ್ಶನ ನೀಡದ ಬೇಸರ
“ಏಕದಿನ ಮಾದರಿಯಲ್ಲಿ ನಾನು ಉತ್ತಮ ಪ್ರದರ್ಶನ ನೀಡದಿದ್ದಕ್ಕಾಗಿ ವಿಷಾದಿಸುತ್ತೇನೆ. ನಾನು ಚೆನ್ನಾಗಿ ಆಡಿದ್ದರೆ ಆ ತಂಡದಲ್ಲಿ ಇರುತ್ತಿದ್ದೆ. ಉತ್ತಮ ಪ್ರದರ್ಶನ ನೀಡಿದ ಆಟಗಾರ ಆ ಸ್ಥಾನಕ್ಕೆ ಅರ್ಹರು. ಇಬ್ಬರೂ (ಬುಮ್ರಾ, ಶಮಿ) ಒಟ್ಟಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಅವರೊಬ್ಬ(ಶಮಿ) ಅನುಭವಿ ಬೌಲರ್. ನೀವು ಭಾರತಕ್ಕಾಗಿ ಆಡಿದಾಗ ಅದು ವಿಭಿನ್ನ ರೀತಿಯ ಭಾವನೆ. ಇದರಲ್ಲಿ ಜವಾಬ್ದಾರಿಯ ಪ್ರಜ್ಞೆಯೂ ಇದೆ ಮತ್ತು ನೀವು ದೇಶಕ್ಕಾಗಿ ಆಡಲು ಇಷ್ಟಪಡುತ್ತೀರಿ. ಏಕದಿನ ವಿಶ್ವಕಪ್‌ನಲ್ಲಿ ನಾವು ನೋಡಿದಂತೆ ಇಬ್ಬರೂ ಒಟ್ಟಿಗೆ ಬೌಲ್ ಮಾಡುವುದನ್ನು ನೋಡುವುದು ಒಳ್ಳೆಯದು,” ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡ
ರೋಹಿತ್ ಶರ್ಮಾ (ನಾಯಕ),(Rohit Sharma) ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ.