ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸುಲಿಗೆಕೋರರು ಒಂದಿಲ್ಲೊಂದು ಖತರ್ನಾಕ್ ಪ್ಲಾನ್ ಮಾಡುವ ಮೂಲಕ ಜನರಿಂದ ಸುಲಿಗೆ ಮಾಡಲು ಹೊಂಚು ಹಾಕುತ್ತಿರುತ್ತಾರೆ. ಈಗ ಮತ್ತೊಂದು ಇಂತಹ ಪ್ರಕರಣ ಬೆಳಕಿಗೆ ಬಂದಿದೆ.
ರಸ್ತೆಯಲ್ಲಿ ದಿಢೀರ್ ಅಡ್ಡ ನುಗ್ಗಿ ಆಕ್ಸಿಡೆಂಟ್ ಕತೆ ಕಟ್ಟಿ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದಾರೆ. ಟಾರ್ಗೆಟ್ ಮಾಡಿ ಕಾರುಗಳಿಗೆ ಅಡ್ಡ ಬಂದು ಸುಲಿಗೆ ಮಾಡುತ್ತಿದ್ದಾರೆ. ರಸ್ತೆ ದಾಟುವ ನೆಪದಲ್ಲಿ ಏಕಾಏಕಿ ನುಗ್ಗುವ ಆಸಾಮಿಗಳು, ವೇಗವಾಗಿ ಬರುವ ಕಾರುಗಳ ಬಳಿ ಬಿದ್ದು ಆಕ್ಸಿಡೆಂಟ್ ಕತೆ ಕಟ್ಟುತ್ತಿದ್ದಾರೆ. ನಂತರ ಕಾರು ಚಾಲಕರಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆ.
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ(White Field) ಇದೇ ರೀತಿಯ ಕೃತ್ಯ ನಡೆದಿದ್ದು, ದಂಪತಿಗಳು ಹೋಗುತ್ತಿದ್ದ ಕಾರಿಗೆ ಏಕಾಏಕಿ ನುಗ್ಗಿದ ಗ್ಯಾಂಗ್, ಕಾರು ತಡೆದು ಸುಲಿಗೆ ಮಾಡಲು ಯತ್ನಿಸಿದ್ದಾರೆ. ಆದರೆ, ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸಂಪೂರ್ಣ ಘಟನೆ ಸೆರೆಯಾಗಿದೆ. ವಿಡಿಯೋ ಎಂದು ಹೇಳಿದ ಕೂಡಲೇ ಬೈಕ್ ಸವಾರರು ನಾಪತ್ತೆಯಾಗಿದ್ದಾರೆ. ಕಾರು ಮಾಲೀಕರು ಎಕ್ಸ್ ನಲ್ಲಿ ಪೊಲೀಸರಿಗೆ ಈ ವಿಡಿಯೋ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.