ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ನಲ್ಲಿ ಭಾರತೀಯ ತಂಡ ಉತ್ತಮ ಪ್ರದರ್ಶನ ತೋರುತ್ತಿದ್ದು, ಕೇವಲ 2.5 ಓವರ್ ಗಳಲ್ಲೇ ಪಂದ್ಯ ಗೆದ್ದ ಸಾಧನೆ ಮಾಡಿದೆ.
ಮಲೇಷ್ಯಾ ವಿರುದ್ಧ ನಡೆದ 16ನೇ ಪಂದ್ಯದಲ್ಲಿ ಭಾರತ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಇನ್ನಿಂಗ್ಸ್ ಆರಂಭಿಸಿದ ಮಲೇಷ್ಯಾ ತಂಡ(Malaysian team) ಭಾರತೀಯ ತಂಡದ ಬೌಲರ್ ಗಳಿಗೆ ಸಂಪೂರ್ಣ ಶರಣಾದರು.
ಪರಿಣಾಮವಾಗಿ ಪವರ್ ಪ್ಲೇ ಮುಗಿಯುವಷ್ಟರಲ್ಲೇ ಕೇವಲ 22 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಅಲ್ಲದೇ, ಮಲೇಷ್ಯಾ ತಂಡ 14.3 ಓವರ್ ಗಳಲ್ಲಿ ಕೇವಲ 31 ರನ್ ಗಳಿಸಿ ಆಲೌಟ್ ಆಯಿತು. ಭಾರತ ತಂಡದ ಪರ ವೈಷ್ಣವಿ ಶರ್ಮಾ 4 ಓವರ್ ಗಳಲ್ಲಿ ಕೇವಲ 5 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಆಯುಷಿ ಶುಕ್ಲಾ 3.3 ಓವರ್ಗಳಲ್ಲಿ 8 ರನ್ ನೀಡಿ 3 ವಿಕೆಟ್ ಉರುಳಿಸಿದರು. ಜೋಶಿತಾ(Joshita) ಒಂದು ವಿಕೆಟ್ ಪಡೆದು ಮಿಂಚಿದರು.
ಕೇವಲ 17 ಎಸೆತಗಳಲ್ಲೇ ಮುಗಿದ ಪಂದ್ಯ
32 ರನ್ ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ ಕೇವಲ 17 ಎಸೆತಗಳಲ್ಲೇ ಗೆದ್ದು ಬೀಗಿತು. ಆರಂಭಿಕರಾಗಿ ಕಣಕ್ಕಿಳಿದ ಗೊಂಗಡಿ ತ್ರಿಷಾ 12 ಎಸೆತಗಳಲ್ಲಿ 5 ಫೋರ್ ಗಳೊಂದಿಗೆ 27 ರನ್ ಗಳಿಸಿದರೆ, ಕಮಿಲಿನಿ 4 ರನ್ ಗಳಿಸಿದರು. ಆ ಮೂಲಕ ಭಾರತ ತಂಡ 2.5 ಓವರ್ಗಳಲ್ಲಿ 32 ರನ್ ಗಳಿಸಿ 10 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು.