ಬೆಂಗಳೂರು: ಗುರುವಾರದಿಂದ(ಜ.23) ಬೆಂಗಳೂರಿನಲ್ಲಿ ಶುರುವಾಗಲಿರುವ ರಣಜಿ ಟ್ರೋಫಿ(Ranji Trophy) ದ್ವಿತೀಯ ಸುತ್ತಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಿಸಲಾಗಿದೆ. ಮಯಾಂಕ್ ಅಗರ್ವಾಲ್(Mayank Agarwal) ನಾಯಕತ್ವ ವಹಿಸಲಿದ್ದು, ಶ್ರೇಯಸ್ ಗೋಪಾಲ್(Shreyas Gopal) ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಆದರೆ, ಬಲಿಷ್ಠ ಆಟಗಾರ ಕೆ. ಎಲ್ ರಾಹುಲ್‌ಗೆ ಅವಕಾಶ ನೀಡಿಲ್ಲ. ರಾಹುಲ್ ಮೊಣಕೈ ನೋವಿನಿಂದ ಬಳಲುತ್ತಿದ್ದು, ಈ ಬಗ್ಗೆ ಬಿಸಿಸಿಐ(BCCI) ವೈದ್ಯಕೀಯ ತಂಡಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ದೇವದತ್ ಪಡಿಕ್ಕಲ್, ವೇಗಿ ಪ್ರಸಿದ್ಧ್ ಕೃಷ್ಣ ಹಾಗೂ ಯುವ ಬ್ಯಾಟರ್ ಅನೀಶ್ ಕೆ.ವಿ.(Anish K.V.) ತಂಡಕ್ಕೆ ಮರಳಿದ್ದಾರೆ. ಆದರೆ ಮೊದಲ ಹಂತದಲ್ಲಿ ತಂಡದಲ್ಲಿದ್ದ ಮನೀಶ್ ಪಾಂಡೆ, ಕಿಶನ್ ಬೆದರೆಗೆ ಅವರನ್ನು ತಂಡದಿಂದ ಕೈಬಿಡಲಾಗಿದೆ. ‘ಸಿ’ ಗುಂಪಿನಲ್ಲಿರುವ ಕರ್ನಾಟಕ ಆಡಿರುವ 5 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿದ್ದು, ಇನ್ನೆರಡು ಪಂದ್ಯಗಳನ್ನು ಗೆದ್ದರೂ ನಾಕೌಟ್ ಪ್ರವೇಶಿಸುವ ಸಾಧ್ಯತೆ ಕಡಿಮೆ.
ಕರ್ನಾಟಕ ತಂಡ
ಮಯಾಂಕ್ ಅಗರ್ವಾಲ್(ನಾಯಕ), ಶ್ರೇಯಸ್(ಉಪನಾಯಕ), ದೇವದತ್, ಅನೀಶ್, ಸ್ಮರಣ್, ಶ್ರೀಜಿತ್, ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಪ್ರಸಿದ್ಧ್ ಕೃಷ್ಣ, ಕೌಶಿಕ್, ಅಭಿಲಾಶ್ ಶೆಟ್ಟಿ, ಯಶೋವರ್ಧನ್, ನಿಕಿನ್ ಜೋಸ್, ವಿದ್ಯಾಧರ್ ಪಾಟೀಲ್, ಸುಜಯ್ ಸತೇರಿ, ಮೊಹ್ಸಿನ್ ಖಾನ್.
ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ
ಇನ್ನು ಮುಂಬೈ ತಂಡದ ಪರ ರೋಹಿತ್ ರಣಜಿ ಆಡಲಿದ್ದಾರೆ. ಜಮ್ಮುಕಾಶ್ಮೀರ(Jammu and Kashmir) ವಿರುದ್ಧದ ಪಂದ್ಯದಲ್ಲಿ ಕಣಕಿಳಿಯಲಿದ್ದಾರೆ. ಇದು 10 ವರ್ಷದ ಬಳಿಕ ಅವರು ಆಡುವ ದೇಶೀಯ ಕ್ರಿಕೆಟ್ ಪಂದ್ಯ. ಮುಂಬೈ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡ ತಂಡದಲ್ಲಿದ್ದಾರೆ. ಹಿರಿಯ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ಸೌರಾಷ್ಟ್ರ ಪರ ಆಡಲಿದ್ದಾರೆ. ರಿಷಭ್ ಪಂತ್ ಡೆಲ್ಲಿ ಪರ, ಮೊಹಮ್ಮದ್ ಸಿರಾಜ್ ಹೈದರಾಬಾದ್ ಪರ, ಶುಭಮನ್ ಗಿಲ್ ಪಂಜಾಬ್ ಪರ ಆಡಲಿದ್ದಾರೆ. ಡೆಲ್ಲಿ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದರೂ ಕೊನೆಯ ಕ್ಷಣದಲ್ಲಿ ಅವರು ಕುತ್ತಿಗೆ ನೋವಿನ ಕಾರಣ ನೀಡಿ ಆಡುದಿಲ್ಲ ಎಂದಿದ್ದರು.