ಬಾಂಗ್ಲಾದೇಶ ತಂಡದ ಮಾಜಿ ನಾಯಕ, ಅನುಭವಿ ಆಲ್ರೌಂಡರ್ ಹಾಗೂ ಮಾಜಿ ಸಂಸದ ಶಕೀಬ್ ಅಲ್ ಹಸನ್ (Shakib Al Hasan) ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಕೀಬ್ ವಿರುದ್ಧ ಬಂಧನಕ್ಕೆ ವಾರಂಟ್ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ. ಐಎಫ್ಐಸಿ ಬ್ಯಾಂಕ್ ಚೆಕ್ ಬೌನ್ಸ್ (IFIC Bank check bounce) ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಹಾಗೂ ರಾಜಕಾರಣಿ ಶಕೀಬ್ ಅಲ್ ಹಸನ್ ವಿರುದ್ಧ ಢಾಕಾ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ.
ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ನಲ್ಲಿ ಕಾನೂನುಬಾಹಿರ ಬೌಲಿಂಗ್ ಮಾಡಿದ್ದಾರೆ ಎಂಬ ದೂರು ಬಂದಿದ್ದ ಕಾರಣ ಅವರ ಬೌಲಿಂಗ್ ಅನ್ನು ನಿಷೇಧಿಸಲಾಗಿತ್ತು. ಇದರ ಬೆನ್ನಲ್ಲೇ ಈ ಕೇಸ್ ಸುತ್ತಿಕೊಂಡಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ಅವರನ್ನು ಹುದ್ದೆಯಿಂದ ತೆಗೆದು ಹಾಕಿದಾಗಿನಿಂದ ವಿದೇಶದಲ್ಲಿ ವಾಸಿಸುತ್ತಿರುವ ಅವಾಮಿ ಲೀಗ್ ಮಾಜಿ ಸಂಸದರಾಗಿರುವ ಶಕೀಬ್ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. ವಾರಂಟ್ನಲ್ಲಿ ಇತರ ಮೂವರು ವ್ಯಕ್ತಿಗಳ ಹೆಸರೂ ಇದೆ.
ಢಾಕಾದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಿಯಾದುರ್ ರಹಮಾನ್ (Ziadur Rahman) ಭಾನುವಾರ (ಜ 19) ಆದೇಶ ಹೊರಡಿಸಿದ್ದಾರೆ ಎಂದು ಕ್ರಿಕ್ಬಜ್ ವರದಿ (Cricbuzz report) ಮಾಡಿದೆ. ಡಿಸೆಂಬರ್ 15 ರಂದು ಚೆಕ್ ವಂಚನೆ ಪ್ರಕರಣದಲ್ಲಿ ಶಕೀಬ್ ಹೆಸರು ದಾಖಲಾಗಿತ್ತು. ಡಿಸೆಂಬರ್ 18 ರಂದು ಪ್ರಾಥಮಿಕ ವಿಚಾರಣೆ ನಂತರ, ನ್ಯಾಯಾಲಯವು ಜನವರಿ 19 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿತ್ತು.
2.95 ಕೋಟಿ ರೂ ಚೆಕ್ ಬೌನ್ಸ್
ಎರಡು ಪ್ರತ್ಯೇಕ ಚೆಕ್ಗಳ ಮೂಲಕ ಬಿಡಿಟಿ-ಬಾಂಗ್ಲಾದೇಶಿ ಟಾಕಾ 4,14,57,000 (ಸುಮಾರು 2.95 ಕೋಟಿ ರೂ.) ವರ್ಗಾಯಿಸುವ ಬದ್ಧತೆಯನ್ನು ಶಕೀಬ್ ಮತ್ತು ಇತರ ಮೂವರು ಪೂರೈಸಿಲ್ಲ ಎಂದು ಆರೋಪಿಸಿ ಐಎಫ್ಐಸಿ ಬ್ಯಾಂಕಿನ ಸಂಬಂಧ ಅಧಿಕಾರಿ ಶಾಹಿಬುರ್ ರಹಮಾನ್ ಬ್ಯಾಂಕ್ ಪರವಾಗಿ ಪ್ರಕರಣ ದಾಖಲಿಸಿದ್ದರು. ಶಕೀಬ್ ಅವರ ಕಂಪನಿ ಅಲ್ ಹಸನ್ ಆಗ್ರೋ ಫಾರ್ಮ್ಸ್ ಲಿಮಿಟೆಡ್, ಅದರ ವ್ಯವಸ್ಥಾಪಕ ನಿರ್ದೇಶಕ ಘಾಜಿ ಶಹಗೀರ್ ಹುಸೇನ್ ಮತ್ತು ನಿರ್ದೇಶಕರಾದ ಇಮ್ದಾದುಲ್ ಹಕ್ ಮತ್ತು ಮಣಿಕರ್ ಬೇಗಂ ಈ ಪ್ರಕರಣದ ಇತರ ಆರೋಪಿಗಳು. ಶಕೀಬ್ ಅವರ ಕಂಪನಿಯು ಐಎಫ್ಐಸಿ ಬ್ಯಾಂಕಿನ ಬನಾನಿ ಶಾಖೆಯಿಂದ ಹಲವಾರು ಬಾರಿ ಹಣವನ್ನು ಎರವಲು ಪಡೆದಿತ್ತು.
2023ರಲ್ಲಿ ಶಕೀಬ್ ಅವಾಮಿ ಲೀಗ್ ಪಕ್ಷ ಸೇರುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ಪಕ್ಷದ ಟಿಕೆಟ್ನಲ್ಲಿ 2024ರ ಜನವರಿ 7 ರಂದು ನಡೆದ ಅವಿರೋಧ ಚುನಾವಣೆಯಲ್ಲಿ ಮಾಗುರಾ-1 ಕ್ಷೇತ್ರದಿಂದ ಗೆದ್ದಿದ್ದೆರು. ಶಕೀಬ್ ಅಲ್ ಹಸನ್ ಟಿ20 ಮತ್ತು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಆದರೆ, ಏಕದಿನ ಕ್ರಿಕೆಟ್ಗೆ ನಿವೃತ್ತರಾಗಿಲ್ಲ. ಹೀಗಿದ್ದರೂ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಬಾಂಗ್ಲಾದೇಶ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ತಮ್ಮ ದೇಶದಲ್ಲಿ ನಡೆದ ದಂಗೆಯ ನಂತರ ಶಕೀಬ್, ಬಾಂಗ್ಲಾದೇಶಕ್ಕೆ ಹೋಗಿಲ್ಲ. ಕೊಲೆ ಪ್ರಕರಣವನ್ನೂ ಎದುರಿಸುತ್ತಿದ್ದಾರೆ.
ಅಮೆರಿಕದಲ್ಲಿ ವಾಸ
ಶಕೀಬ್ ಪ್ರಸ್ತುತ ಅಮೆರಿಕದಲ್ಲಿ ನೆಲೆಸಿದ್ದು, ಬಾಂಗ್ಲಾದೇಶಕ್ಕೆ ಮರಳುವ ಸಾಧ್ಯತೆಯಿಲ್ಲ ಎಂದು ಹೇಳಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 71 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಶಕೀಬ್, 4609 ರನ್, 246 ವಿಕೆಟ್ ಪಡೆದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 247 ಪಂದ್ಯಗಳಲ್ಲಿ 7570 ರನ್, 317 ವಿಕೆಟ್ ಕಿತ್ತಿದ್ದಾರೆ. ಟಿ20ಐ 129 ಪಂದ್ಯಗಳಲ್ಲಿ 2551 ರನ್, 149 ವಿಕೆಟ್ ಕಬಳಿಸಿದ್ದಾರೆ.