ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳವು ವೈವಿಧ್ಯತೆಯಲ್ಲಿ ಏಕತೆಯ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರ ತಮ್ಮ 118ನೇ ಆವೃತ್ತಿಯ ಮತ್ತು 2025ರ ಮೊದಲ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್‌ನಲ್ಲಿ ಮಾತನಾಡಿದ ಅವರು, ಐತಿಹಾಸಿಕ ಧಾರ್ಮಿಕ ಸಮ್ಮೇಳನವಾದ ಕುಂಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವ ಯುವಜನತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಾವಾಗ ದೇಶದ ಯುವ ಜನಾಂಗವು ಹೆಮ್ಮೆಯಿಂದ ತನ್ನ ನಾಗರಿಕತೆಯಲ್ಲಿ ಪಾಲ್ಗೊಳ್ಳುತ್ತದೋ, ಆಗ ಆ ನಾಗರಿಕತೆಯ ಬೇರುಗಳು ಗಟ್ಟಿಯಾಗುತ್ತದೆ ಮತ್ತು ಸುವರ್ಣ ಭವಿಷ್ಯವು ಖಾತ್ರಿಯಾಗುತ್ತದೆ ಎಂದೂ ಮೋದಿ ಹೇಳಿದ್ದಾರೆ.
ಪ್ರಯಾಗ್ ರಾಜ್ ನಲ್ಲಿ ಆರಂಭವಾಗಿರುವ ಮಹಾಕುಂಭವು ಮಾನವತೆಯ ಅವಿಸ್ಮರಣೀಯ ಸಾಗರವಾಗಿದೆ, ಸಮಾನತೆ ಮತ್ತು ಸಾಮರಸ್ಯದ ಅಸಾಮಾನ್ಯವಾದ ಸಂಗಮವಾಗಿದೆ. ಈ ಮಹಾಕುಂಭವು ವೈವಿಧ್ಯತೆಯಲ್ಲಿ ಏಕತೆಯ ಹಬ್ಬವಾಗಿದೆ ಎಂದೂ ಮೋದಿ ಬಣ್ಣಿಸಿದ್ದಾರೆ. ಭಾರತೀಯ ಸಂಪ್ರದಾಯಗಳು ಹೇಗೆ ಇಡೀ ದೇಶವನ್ನು ಬೆಸೆದಿದೆ ಎಂಬುದಕ್ಕೂ ಕುಂಭ ಉದಾಹರಣೆಯಾಗಿ ನಿಲ್ಲುತ್ತದೆ. ಒಂದು ಕಡೆ ಉತ್ತರದಲ್ಲಿ ಅಂದರೆ ಪ್ರಯಾಗ್‌ರಾಜ್, ಉಜ್ಜೈನ್, ನಾಸಿಕ್, ಹರಿದ್ವಾರದಲ್ಲಿ ಕುಂಭಮೇಳ ನಡೆಯುತ್ತದೆ, ಮತ್ತೊಂದೆಡೆ ದಕ್ಷಿಣದಲ್ಲಿ ಗೋದಾವರಿ, ಕೃಷ್ಣಾ, ನರ್ಮದಾ ಮತ್ತು ಕಾವೇರಿ ನದಿ ತಟದಲ್ಲಿ ಪುಷ್ಕರಮ್ ನಡೆಯುತ್ತದೆ ಎಂದೂ ಅವರು ಹೇಳಿದ್ದಾರೆ.
ಗಣರಾಜ್ಯೋತ್ಸವದ ಶುಭಾಶಯ
ಇದೇ ಸಂದರ್ಭದಲ್ಲಿ ದೇಶವಾಸಿಗಳಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನೂ ಹೇಳಿರುವ ಮೋದಿ, 75ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸಂವಿಧಾನ ರಚನಾ ಮಂಡಳಿಯ ಎಲ್ಲ ಸದಸ್ಯರಿಗೂ ಗೌರವ ಸಲ್ಲಿಸಿದ್ದಾರೆ. ಜತೆಗೆ ಅವರೆಲ್ಲರ ಧ್ವನಿಯಿರುವ ಆಡಿಯೋವನ್ನು ಪ್ಲೇ ಮಾಡಿದ ಪ್ರಧಾನಿ, ದೇಶದ ಜನರೆಲ್ಲರೂ ಅವರಿಂದ ಸ್ಫೂರ್ತಿ ಪಡೆಯಬೇಕು ಎಂದರು.
ಚುನಾವಣಾ ಆಯೋಗಕ್ಕೆ ಧನ್ಯವಾದ
ಕಾಲ ಕಾಲಕ್ಕೆ ದೇಶದ ಮತದಾನ ಪ್ರಕ್ರಿಯೆಯನ್ನು ಆಧುನೀಕರಣಗೊಳಿಸಿದ ಮತ್ತು ಬಲಿಷ್ಠಗೊಳಿಸಿದ ಚುನಾವಣಾ ಆಯೋಗಕ್ಕೂ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. ಆಯೋಗವು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಂಡು ದೇಶದ ನಾಗರಿಕರಿಗೆ ಹೆಚ್ಚಿನ ಅಧಿಕಾರವನ್ನು ತಂದುಕೊಟ್ಟಿದೆ ಎಂದೂ ಹೇಳಿದ್ದಾರೆ.
3ನೇ ಭಾನುವಾರ ಮನ್ ಕಿ ಬಾತ್ ಏಕೆ?
ಸಾಮಾನ್ಯವಾಗಿ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಧಾನಮಂತ್ರಿಯವರ ಮನ್ ಕೀ ಬಾತ್ ಕಾರ್ಯಕ್ರಮ ಪ್ರಸಾರವಾಗುತ್ತದೆ. ಆದರೆ, ಮುಂದಿನ ಭಾನುವಾರ ಗಣರಾಜ್ಯೋತ್ಸವ ಇರುವ ಕಾರಣ, ಈ ಬಾರಿ ಮೂರನೇ ಭಾನುವಾರದಂದೇ ಇದನ್ನು ಪ್ರಸಾರ ಮಾಡಲಾಗಿದೆ.