ಕರ್ನಾಟಕ(karnataka) ಮೂಲದ ಕ್ರಿಕೆಟಿಗ ಕರುಣ್ ನಾಯರ್ (Karun Nair) ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ಪರ ಆಡುತ್ತಿದ್ದಾರೆ. ಜತೆಗೆ ಬ್ಯಾಟಿಂಗ್‌ನಲ್ಲಿ ಅಮೋಘ ಸಾಧನೆ ಮಾಡುತ್ತಿದ್ದಾರೆ. ಕರುಣ್, ಆಡಿದ ಕೇವಲ ಆರು ಇನ್ನಿಂಗ್ಸ್‌ಗಳಲ್ಲಿ ದಾಖಲೆಯ 664 ರನ್ ಗಳಿಸಿದ್ದಾರೆ. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಟೂರ್ನಿಯುದ್ದಕ್ಕೂ ಐದು ಶತಕ ಸಿಡಿಸಿರುವ ಆಟಗಾರ, ಒಂದು ಬಾರಿ ಮಾತ್ರ ಔಟಾಗಿದ್ದಾರೆ.
ಸುಂದರ ಬ್ಯಾಟಿಂಗ್ ಪ್ರದರ್ಶನದ ಹಿನ್ನೆಲೆಯಲ್ಲಿ ಕ್ರಿಕೆಟ್(cricket) ವಲಯದಲ್ಲಿ ನಾಯರ್ ಅವರ ಹೆಸರು ಮತ್ತೊಮ್ಮೆ ಚರ್ಚೆಯಲ್ಲಿದೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಅವರು ಮತ್ತೆ ಟೀಮ್ ಇಂಡಿಯಾ ಪರ ಆಡಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಹಲವು ಮಾಜಿ ಕ್ರಿಕೆಟಿಗರು ಕೂಡಾ ಇದೇ ವಾದ ಮಾಡುತ್ತಿದ್ದಾರೆ. ಹೀಗಾಗಿ ಬಿಸಿಸಿಐ ಆಯ್ಕೆದಾರರು ಮುಂದೆ ಕರುಣ್ ಅವರನ್ನು ಟೀಮ್ ಇಂಡಿಯಾಗೆ ಮಾಡಬಹುದೇ ಎಂಬ ಪ್ರಶ್ನೆ ಎದುರಾಗಿದೆ. ಆದರೆ, ಅದು ಎಷ್ಟು ಸಾಧ್ಯ ಎಂಬುದು ಇನ್ನೂ ಗೊತ್ತಿಲ್ಲ.
ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್(Harbhajan Singh)ಕೂಡ ಕರುಣ್ ನಾಯರ್ ಪರ ಮಾತನಾಡಿದ್ದಾರೆ. ಅವರನ್ನು ಯಾಕೆ ಭಾರತ ತಂಡದಲ್ಲಿ ಆಡಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. 2016ರ ಡಿಸೆಂಬರ್ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ವಿಶೇಷ ದಾಖಲೆ ಹೊಂದಿರುವ ನಾಯರ್ ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಗಿರುವುದನ್ನು ಪ್ರಶ್ನಿಸಿದದಾರೆ. ಕರುಣ್ ಭಾರತದ ಪರ ಆಡಿದ್ದು ಕೇವಲ ಮೂರು ಟೆಸ್ಟ್ ಪಂದ್ಯಗಳನ್ನು ಮಾತ್ರ. ಅವರಿಗೆ ಅವಕಾಶವನ್ನೇ ನೀಡಲಾಗುತ್ತಿಲ್ಲ.
ಅನ್ಯಾಯ ಎಂದ ಹರ್ಭಜನ್
“ನಾನು ಕರುಣ್ ಅಂಕಿ-ಅಂಶಗಳನ್ನು ಗಮನಿಸುತ್ತಿದ್ದೇನೆ . 2024/25ರಲ್ಲಿ ಅವರು ಆರು ಇನ್ನಿಂಗ್ಸ್‌ಗಳನ್ನು ಆಡಿ, 5ರಲ್ಲಿ ಅಜೇಯರಾಗಿದ್ದಾರೆ. 664 ರನ್ ಬಾರಿಸಿದ್ದು ಉತ್ತಮ ಸರಾಸರಿ ಕೂಡಾ ಹೊಂದಿದ್ದಾರೆ. 120ರ ಸ್ಟ್ರೈಕ್ ರೇಟ್‌ನಲ್ಲಿ ಆಡಿದ್ದಾರೆ. ಆದರೂ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವುದಿಲ್ಲ. ಇದು ಅನ್ಯಾಯ,” ಎಂದು ಹರ್ಭಜನ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾದಲ್ಲಿ ಸದ್ಯ ಕಳಪೆ ಫಾರ್ಮ್ ಹಾಗೂ ತಂಡದ ಸೋಲಿನ ಕುರಿತ ಚರ್ಚೆ ನಡೆಯುತ್ತಿದೆ. ಕಳಪೆ ಫಾರ್ಮ್‌ನಿಂದಾಗಿ ರೋಹಿತ್ ಶರ್ಮಾ(Rohit Sharma) ಮತ್ತು ವಿರಾಟ್ ಕೊಹ್ಲಿ(Virat Kohli) ಅವರನ್ನು ರಣಜಿ ಟ್ರೋಫಿಯಲ್ಲಿ ಆಡುವಂತೆ ಹೇಳಲಾಗುತ್ತಿದೆ. ಆದರೆ ದೇಶೀಯ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡುವವರಿಗೆ ಸೂಕ್ತ ಗೌರವ ನೀಡಲಾಗುತ್ತಿಲ್ಲ ಎಂದು ಹೇಳಿದ ಭಜಿ, ತಂಡದ ಆಯ್ಕೆಯ ಮಾನದಂಡವನ್ನು ಪ್ರಶ್ನಿಸಿದ್ದಾರೆ.
ಕಲಾತ್ಮಕ ಬ್ಯಾಟಿಂಗ್
2024ರಲ್ಲಿ, ನಾಯರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದರು. ತಮ್ಮ ಫೇವರೆಟ್ ಸ್ವರೂಪದಲ್ಲಿ 44.42ರ ಸರಾಸರಿಯಲ್ಲಿ ಬ್ಯಾಟ್ ಬೀಸಿ 1,466 ರನ್ ಗಳಿಸಿದರು. ಇದರಲ್ಲಿ ನಾಲ್ಕು ಶತಕಗಳು ಮತ್ತು 7 ಅರ್ಧಶತಕಗಳು ಸೇರಿವೆ. ಗರಿಷ್ಠ ಸ್ಕೋರ್ ಅಜೇಯ 202 ರನ್. ಅತ್ತ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ನಾರ್ಥಾಂಪ್ಟನ್‌ಶೈರ್ ಪರ ಆಡಿದ ಏಳು ಪಂದ್ಯಗಳಲ್ಲಿ 48.70ರ ಸರಾಸರಿಯಲ್ಲಿ 487 ರನ್ ಗಳಿಸಿದ್ದಾರೆ. ಇದರಲ್ಲಿಯೂ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ.
“ಹಲವು ಆಟಗಾರರನ್ನು ಕೇವಲ ಎರಡು ಪಂದ್ಯಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇನ್ನೂ ಕೆಲವರನ್ನು ಐಪಿಎಲ್(IPL) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಹಾಗಿದ್ದರೆ, ಕರುಣ್ ವಿಷಯದಲ್ಲಿ ಮಾತ್ರ ನಿಯಮಗಳು ಏಕೆ ಭಿನ್ನವಾಗಿವೆ? ರೋಹಿತ್ ಮತ್ತು ವಿರಾಟ್ ಫಾರ್ಮ್‌ನಲ್ಲಿಲ್ಲ ಎಂದು ಜನರು ಹೇಳುತ್ತಾರೆ. ಅವರನ್ನು ನೀವು ರಣಜಿ ಕ್ರಿಕೆಟ್ ಆಡಲು ಹೇಳುತ್ತೀರಿ. ಆದರೆ ರಣಜಿ ಆಡಿ ರನ್ ಗಳಿಸುತ್ತಿರುವವರನ್ನು ಏಕೆ ನಿರ್ಲಕ್ಷಿಸುತ್ತಿದ್ದೀರಿ” ಎಂದು ಹರ್ಭಜನ್ ಪ್ರಶ್ನೆ ಮಾಡಿದ್ದಾರೆ.
ಹಚ್ಚೆ ಇಲ್ಲದ್ದಕ್ಕೆ ಆಯ್ಕೆಯಿಲ್ಲವೇ?
ತ್ರಿಶತಕದ ನಂತರವೂ ಅವರನ್ನು ಯಾಕೆ ಕೈಬಿಡಲಾಯಿತು ಎಂದು ನನಗೆ ಅರ್ಥವಾಗಲಿಲ್ಲ. ಅವರಂತಹ ಆಟಗಾರರ ಬಗ್ಗೆ ಯಾರೂ ಮಾತನಾಡದಿರುವುದು ನನಗೆ ನೋವುಂಟು ಮಾಡುತ್ತದೆ. ವಿಭಿನ್ನ ಆಟಗಾರಿಗೆ ಇಲ್ಲಿ ವಿಭಿನ್ನ ನಿಯಮಗಳು. ಆ ರೀತಿ ಇರಬಾರದು. ಅವರು ನಿರಂತರವಾಗಿ ರನ್ ಗಳಿಸುತ್ತಿರುವಾಗ ಅವರನ್ನು ಆಡಿಸಬೇಕಲ್ವೇ? ಆತ ಹಚ್ಚೆ ಹಾಕಿಸಿಕೊಂಡಿಲ್ಲ, ಅಲಂಕಾರಿಕ ಬಟ್ಟೆ ಧರಿಸಲ್ಲ ಅನ್ನೋದೇ ನೀವು ಆತನನ್ನು ಆಯ್ಕೆ ಮಾಡದಿರಲು ಕಾರಣವೇ? ಆತ ಕಷ್ಟಪಟ್ಟು ಕೆಲಸ ಮಾಡುವುದಿಲ್ಲವೇ?” ಎಂದು ಹರ್ಭಜನ್ ಪ್ರಶ್ನಿಸಿದ್ದಾರೆ.