ಭಾರತೀಯ ಬಾಹ್ಯಾಕಾಶ ಸಂಸ್ಥೆ(Indian Space Agency) ಮತ್ತೊಂದು ಯಶಸ್ವಿ ಸಾಧನೆ ಮಾಡಿದೆ. ಬಾಹ್ಯಾಕಾಶ ಡಾಕಿಂಗ್ ಪ್ರಯೋಗದ (ಸ್ಪಾಡೆಕ್ಸ್) ಭಾಗವಾಗಿ ಉಪಗ್ರಹಗಳ ಡಾಕಿಂಗ್ ಅನ್ನು ಗುರುವಾರ (ಜನವರಿ 16) ಪೂರ್ಣಗೊಳಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಎಸ್ಎ, ರಷ್ಯಾ ಮತ್ತು ಚೀನಾದ ನಂತರ ಯಶಸ್ವಿಯಾಗಿ ಬಾಹ್ಯಾಕಾಶ ಡಾಕಿಂಗ್ (SpaDeX ) ಸಾಧಿಸಿದ ನಾಲ್ಕನೇ ದೇಶ ಭಾರತ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದ್ದು ಮುಂದಿನ ಅಧ್ಯಯನ ಹಾಗೂ ಬಾಹ್ಯಾಕಾಶ ಕೇಂದ್ರ ನಿರ್ಮಾಣದ ಯೋಜನೆಯಲ್ಲಿ ಮಹತ್ವದ್ದು ಎನಿಸಿದೆ..
“ಬಾಹ್ಯಾಕಾಶ ನೌಕೆ ಡಾಕಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೊಂದು ಐತಿಹಾಸಿಕ ಕ್ಷಣ” ಎಂದು ಇಸ್ರೋ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
“ಸ್ಪಾಡೆಕ್ಸ್ ಡಾಕಿಂಗ್ ಪ್ರಕ್ರಿಯೆ ಹೀಗಿದೆ. 15 ಮೀಟರ್‌ನಿಂದ 3 ಮೀಟರ್ ಹೋಲ್ಡ್ ಪಾಯಿಂಟ್ ವರೆಗೆ ಡಾಕ್ಸ್ ಪೂರ್ಣಗೊಂಡಿದೆ. ಡಾಕಿಂಗ್ ಅನ್ನು ನಿಖರವಾಗಿ ಪ್ರಾರಂಭಿಸಿ ಯಶಸ್ವಿಗೊಳಿಸಲಾಯಿತು.
ಹಿಂತೆಗೆದುಕೊಳ್ಳುವಿಕೆಯು ಸುಗಮವಾಗಿ ನಡೆಯಿತು. ನಂತರ ಸ್ಥಿರತೆ ಕಾಯ್ದುಕೊಳ್ಳಲಾಯಿತು. ಈ ಮೂಲಕ ಬಾಹ್ಯಾಕಾಶ ಡಾಕಿಂಗ್ ಸಾಧಿಸಿದ 4 ನೇ ದೇಶ ಭಾರತ ಎನಿಸಿಕೊಂಡಿದೆ. ಇಡೀ ತಂಡಕ್ಕೆ ಅಭಿನಂದನೆಗಳು. ಭಾರತಕ್ಕೆ ಅಭಿನಂದನೆಗಳು” ಎಂದು ಇಸ್ರೊ ಬರೆದುಕೊಂಡಿದೆ.
ಕಳೆದ ಗುರುವಾರ, ಇಸ್ರೋ ಹೇಳಿಕೆ ಬಿಡುಗಡೆ ಮಾಡಿ, ಸ್ಪಾಡೆಕ್ಸ್ ಸಮಯದಲ್ಲಿ ಉಪಗ್ರಹಗಳ ನಡುವಿನ ಚಲನೆಯನ್ನು ತಡೆಯಲಾಗಿದೆ. ಬಾಹ್ಯಾಕಾಶ ನೌಕೆಯನ್ನು ಪರಸ್ಪರ ಹತ್ತಿರವಾಗಲು ನಿಧಾನಗತಿಯ ಡ್ರಿಫ್ಟ್ ನಡೆಸಲಾಗುತಿದೆ ಎಂದು ಹೇಳಿತ್ತು.
“ಡ್ರಿಫ್ಟ್ ಅನ್ನು ತಡೆಹಿಡಿಯಲಾಗಿದೆ ಮತ್ತು ಬಾಹ್ಯಾಕಾಶ ನೌಕೆಗಳು ಪರಸ್ಪರ ಹತ್ತಿರವಾಗಲು ನಿಧಾನಗತಿಯ ಡ್ರಿಫ್ಟ್ ಮಾಡಲಾಗುತ್ತಿದೆ. ನಾಳೆಯ ವೇಳಗೆ ಇದು ಆರಂಭಿಕ ಪರಿಸ್ಥಿತಿಗಳನ್ನು ತಲುಪುವ ನಿರೀಕ್ಷೆಯಿದೆ” ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೋ ಎರಡು ಬಾರಿ ಸ್ಪಾಡೆಕ್ಸ್ ಮಿಷನ್ ಅನ್ನು ರದ್ದುಗೊಳಿಸಿತ್ತು. ಜನವರಿ 7 ಮತ್ತು ನಂತರ ಜನವರಿ 9 ರಂದು ಮುಂದೂಡಿಕೆ ಮಾಡಿತ್ತು.
ಏನಿದು ಸ್ಪೇಡೆಕ್ಸ್
SpaDeX ಎರಡು ಸಣ್ಣ ಉಪಗ್ರಹಗಳನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಡಾಕಿಂಗ್ ತಂತ್ರಜ್ಞಾನವನ್ನು ಪರೀಕ್ಷಿಸುವ ಯೋಜನೆ ಇದು. ಬಾಹ್ಯಾಕಾಶ ನಿಲ್ದಾಣಗಳನ್ನು ನಿರ್ಮಿಸುವುದು ಮತ್ತು ಆಳವಾದ ಬಾಹ್ಯಾಕಾಶ ಕಾರ್ಯಾಚರಣೆಗಳಂತಹ ಭವಿಷ್ಯದ ಯೋಜನೆಗಳಿಗೆ ಇದು ಅತ್ಯಗತ್ಯ., ಉಪಗ್ರಹವನ್ನು ಇನ್ನೊಂದಕ್ಕೆ ಡಾಕ್ ಮಾಡಲು ಎಚ್ಚರಿಕೆಯಿಂದ ನಿರ್ದೇಶನ ನೀಡುವ ಪ್ರಕ್ರಿಯೆ ಇದಾಗಿದೆ. ಡಾಕಿಂಗ್ ಮಾಡಿದ ನಂತರ, ಉಪಗ್ರಹಗಳು ತಮ್ಮ ಪ್ರತ್ಯೇಕ ಕಾರ್ಯಾಚರಣೆ ಮುಂದುವರಿಸಲು ಬೇರ್ಪಡುವ ಮೊದಲು ವಿದ್ಯುತ್ ಶಕ್ತಿಯನ್ನು ಹಂಚಿಕೊಳ್ಳುತ್ತವೆ.
ಈ ಸಂಕೀರ್ಣ ಕಾರ್ಯಾಚರಣೆ ಯಶಸ್ವಿಯಾಗಲೇಬೇಕು ಎನ್ನುವ ನಿಟ್ಟಿನಲ್ಲಿ ಇಸ್ರೋ ಪ್ರಯತ್ನ ಮಾಡಿದೆ. ಆದ್ದರಿಂದ ಸಮಸ್ಯೆಯನ್ನು ಪರಿಹರಿಸಲು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಯಶಸ್ವಿ ಡಾಕಿಂಗ್ ಈ ತಂತ್ರಜ್ಞಾನವನ್ನು ಕರಗತ ಮಾಡಿಕೊಳ್ಳುವ ನಾಲ್ಕನೇ ದೇಶವಾಗಿ ಭಾರತವನ್ನು ಮಾಡುತ್ತದೆ, ಇದು ಸುಧಾರಿತ ಬಾಹ್ಯಾಕಾಶ ಪರಿಶೋಧನೆಗೆ ನಿರ್ಣಾಯಕವಾಗಿದೆ.