ದೋಹಾ: ಇಸ್ರೇಲ್-ಗಾಜಾ(Israel-Gaza) ಯುದ್ಧದಿಂದ ಬದುಕನ್ನೇ ಕಳೆದುಕೊಂಡ ಎರಡೂ ದೇಶಗಳ ಲಕ್ಷಾಂತರ ಮಂದಿ ನಿಟ್ಟುಸಿರು ಬಿಡುವ ಸಮಯ ಸಮೀಪಿಸಿದೆ. ಇಸ್ರೇಲ್ ಮತ್ತು ಹಮಾಸ್ ಉಗ್ರರ(Hamas extremists) ನಡುವೆ ಕದನ ವಿರಾಮ ಒಪ್ಪಂದವು ನಿರ್ಣಾಯಕ ಹಂತಕ್ಕೆ ತಲುಪಿದ್ದು, ಶೀಘ್ರದಲ್ಲೇ 33 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಅಧಿಕಾರಾವಧಿ ಮುಗಿಯುವ ಹೊತ್ತಲ್ಲೇ ಅಂದರೆ ಮುಂದಿನ ವಾರವೇ ಈ ಮಹತ್ವದ ಬೆಳವಣಿಗೆ ನಡೆಯಲಿದೆ ಎನ್ನಲಾಗಿದೆ.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ಹಮಾಸ್ ಉಗ್ರರು ಹಲವಾರು ಇಸ್ರೇಲಿಗರನ್ನು ಅಪಹರಣಗೈದಿದ್ದರು. ಹಮಾಸ್ ಒತ್ತೆಯಲ್ಲಿ 94 ಇಸ್ರೇಲಿಗರು ಇದ್ದು, ಆ ಪೈಕಿ ಕನಿಷ್ಠ 34 ಮಂದಿ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ಅಂದಾಜಿಸಿದೆ. ಆರಂಭಿಕ 42 ದಿನಗಳ ಕದನ ವಿರಾಮದ ಸಂದರ್ಭದಲ್ಲಿ 33 ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಮಾತುಕತೆ ಅಂತಿಮ ಹಂತಕ್ಕೆ:
ಅಮೆರಿಕ ವಿದೇಶಾಂಗ ಇಲಾಖೆಯನ್ನು ಉದ್ದೇಶಿಸಿ ಮಾತನಾಡಿರುವ ಅಧ್ಯಕ್ಷ ಜೋ ಬೈಡೆನ್,(Joe Biden)ಎರಡೂ ಕಡೆಯವರು ಸಂಧಾನ ಮಾತುಕತೆಯ ಅಂಚಿನಲ್ಲಿದ್ದಾರೆ. ಸದ್ಯದಲ್ಲೇ ಎಲ್ಲವೂ ಸುಖಾಂತ್ಯವಾಗಲಿದೆ ಎಂದು ಹೇಳಿದ್ದರು. ಇದಾದ ಬಳಿಕ ನ್ಯೂಸ್ ಮ್ಯಾಕ್ಸ್ ಸಂದರ್ಶನದಲ್ಲಿ ಮಾತನಾಡಿದ್ದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರೂ, ಮುಂದಿನ ಸೋಮವಾರ ನಡೆಯುವ ನನ್ನ ಪದಗ್ರಹಣ ಸಮಾರಂಭಕ್ಕೂ ಮುನ್ನವೇ ಕದನ ವಿರಾಮ ಘೋಷಣೆಯಾಗುವ ಸುಳಿವು ಸಿಕ್ಕಿದೆ ಎಂದಿದ್ದಾರೆ.
ಏನೇನು ಒಪ್ಪಂದ?
ಮಂಗಳವಾರ ದೋಹಾದಲ್ಲಿ ಅಂತಿಮ ಹಂತದ ಮಾತುಕತೆ ನಡೆಯಲಿದೆ. ಸದ್ಯದ ಮಾಹಿತಿಯ ಪ್ರಕಾರ, ಮೊದಲ ಹಂತದಲ್ಲಿ ಬಿಡುಗಡೆಯಾಗುವ 33 ಒತ್ತೆಯಾಳುಗಳ ಪೈಕಿ ಮೃತ ಒತ್ತೆಯಾಳುಗಳ ದೇಹಗಳೂ ಸೇರಿರಬೇಕು ಎಂದು ಇಸ್ರೇಲ್ ಒತ್ತಾಯಿಸಿದೆ. ಇದೇ ಸಂದರ್ಭದಲ್ಲಿ, ಕೆಲವು ಒತ್ತೆಯಾಳುಗಳ ಕುಟುಂಬಗಳಿಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮೊಂದಿಗೆ ಮಾತುಕತೆ ನಡೆಸಲು ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಮೊದಲ ಹಂತದ ಮಾತುಕತೆ ಬಳಿಕವೂ ಈಜಿಪ್ಟ್-ಗಾಜಾ(Egypt-Gaza) ಗಡಿಯಲ್ಲಿನ ಫಿಲಾಡೆಲ್ಫಿ ಕಾರಿಡಾರ್( Philadelphia Corridor) ನಲ್ಲಿ ಇಸ್ರೇಲ್ ಪಡೆಗಳ ನಿಯೋಜನೆ ಮುಂದುವರಿಯಲಿದೆ. ಮೊದಲ ಹಂತದ ಒಪ್ಪಂದ ಅನುಷ್ಠಾನಗೊಂಡ 16 ದಿನಗಳಲ್ಲಿ 2ನೇ ಹಂತದ ಸಂಧಾನ ಮಾತುಕತೆ ಆರಂಭವಾಗಲಿದೆ. ಇದು ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.