ನವದೆಹಲಿ: 14 ವರ್ಷದ ಇರಾ ಜಾಧವ್ ಭಾನುವಾರ (ಜನವರಿ 12) ಮಹಿಳಾ ಅಂಡರ್ -19 ಏಕದಿನ ಕಪ್‌ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಮುಂಬೈ ಪರ ಆಡಿದ ಅವರು ಅಬ್ಬರದ ಬ್ಯಾಟಿಂಗ್ ಮೂಲಕ ದಾಖಲೆ ಪುಸ್ತಕಗಳಲ್ಲಿ ತನ್ನ ಹೆಸರನ್ನು ಕೆತ್ತಿದ್ದಾರೆ. ಸೀಮಿತ ಓವರ್‌ಗಳ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದಾಗಿದೆ.
ಮೇಘಾಲಯ ವಿರುದ್ಧದ ಮಹಿಳಾ ಅಂಡರ್-19 ಏಕದಿನ ಕಪ್ ಪಂದ್ಯದಲ್ಲಿ ಇರಾ ಜಾಧವ್(Ira Jadhav) ಈ ಸಾಧನೆ ಮಾಡಿದ್ದಾರೆ. ಇರಾ ಜಾಧವ್ 157 ಎಸೆತಗಳಲ್ಲಿ 346* ರನ್ ಗಳಿಸಿದರು. ಅವರ ಬ್ಯಾಟಿಂಗ್‌ನಿಂದಾಗಿ ಮುಂಬೈ ತಂಡ ಒಟ್ಟು 563 ರನ್ ಗಳಿಸಿತು.
ಅಂದ ಹಾಗೆ, ಮುಂಬರುವ ಅಂಡರ್ -19 ಮಹಿಳಾ ವಿಶ್ವಕಪ್ ನಲ್ಲಿ ಭಾರತದ ಮೂವರು ಸ್ಟ್ಯಾಂಡ್ ಬೈ ಆಟಗಾರ್ತಿಯರಲ್ಲಿ ಇರಾ ಜಾಧವ್ ಕೂಡ ಒಬ್ಬರು. ಹೀಗಾಗಿ ಅವರು ಟೂರ್ನಿಗೆ ಮೊದಲೇ ತಮ್ಮ ಸಾಹಸ ಪ್ರದರ್ಶಿಸಿದ್ದಾರೆ.
ಇರಾ ಜಾಧವ್ ತಮ್ಮ ಇನ್ನಿಂಗ್ಸ್‌ನಲ್ಲಿ 42 ಬೌಂಡರಿ ಮತ್ತು 16 ಅಮೋಘ ಸಿಕ್ಸರ್ ಬಾರಿಸುವ ಮೂಲಕ ಆಕ್ರಮಣಕಾರಿ ಪ್ರದರ್ಶನ ನೀಡಿದರು. ನಾಯಲೊ ಹರ್ಲಿ ಗಾಲಾ (116)(Nayalo Hurley Gala) ಅವರೊಂದಿಗೆ ಎರಡನೇ ವಿಕೆಟ್‌ಗೆ 274 ರನ್‌ಗಳನ್ನು ಪೇರಿಸಿದರು ಅದೇ ರೀತಿ 14 ವರ್ಷದ ಈ ಆಟಗಾರ್ತಿ ದೀಕ್ಷಾ ಪವಾರ್ (39 ರನ್) ಅವರೊಂದಿಗೆ ಮೂರನೇ ವಿಕೆಟ್‌ಗೆ 186 ರನ್ ಪೇರಿಸಿದ್ದಾರೆ
ಅಂತಿಮವಾಗಿ ಮುಂಬೈ 50 ಓವರ್‌ಗೆ 3 ವಿಕೆಟ್ ಕಳೆದುಕೊಂಡು 563 ರನ್ ಕಲೆಹಾಕಿತು. ಅವರ ಪ್ರದರ್ಶನವು ಮುಂಬರುವ ಅಂಡರ್ -19 ಮಹಿಳಾ ವಿಶ್ವಕಪ್‌ನಲ್ಲಿ ಅವರನ್ನು ಪ್ರಮುಖ ಬ್ಯಾಟರ್ ಆಗಿ ಆಯ್ಕೆ ಮಾಡಲು ಕಾರಣವಾಗಬಹುದು.
ಇರಾ ಸಾಧನೆಗೆ ಡಯಾನ ಮೆಚ್ಚುಗೆ
ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಇರಾ ಸಾಧನೆಯನ್ನು ಕೊಂಡಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಅವರು, “ಎಲ್ಲಾ ಅಂಡರ್ -15 ಆಟಗಾರ್ತಿ ಇರಾಗೆ ಹ್ಯಾಟ್ಸ್ ಆಫ್. ಅವಳನ್ನು ಭಾರತೀಯ ಜರ್ಸಿಯಲ್ಲಿ ನೋಡಲು ಆಶಿಸುತ್ತೇನೆ,ʼʼ ಎಂದು ಹೇಳಿದ್ದಾರೆ.
ಇರಾ ಜಾಧವ್ ಇತ್ತೀಚೆಗೆ ಡಬ್ಲ್ಯುಪಿಎಲ್ 2025 ಹರಾಜಿಗೆ ನೋಂದಾಯಿಸಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದಾಗ್ಯೂ, ಅವರು ಮಾರಾಟವಾಗಿರಲಿಲ್ಲ. ಈಗ ಅವರು ದೈತ್ಯಾ ಇನ್ನಿಂಗ್ಸ್ ಆಡುತ್ತಿರುವುದರಿಂದ, ಖಂಡಿತವಾಗಿಯೂ ಕೆಲವು ಫ್ರಾಂಚೈಸಿಗಳು ಅವರ ಕಡೆಗೆ ಗಮನ ಹರಿಸಿರುವ ಸಾಧ್ಯತೆಗಳಿವೆ.
ದ್ವಿಶತಕ ಬಾರಿಸಿದ ಇತರ ಮಹಿಳಾ ಕ್ರಿಕೆಟಿಗರು
ಇರಾ ಅವರನ್ನು ಹೊರತುಪಡಿಸಿದರೆ, ಕೇವಲ ನಾಲ್ವರು ಮಹಿಳಾ ಕ್ರಿಕೆಟಿಗರು ಮಾತ್ರ ಅಂಡರ್ 19 ಮಟ್ಟದಲ್ಲಿ ದ್ವಿಶತಕ ಗಳಿಸಿದ್ದಾರೆ. ಸ್ಮೃತಿ ಮಂಧಾನಾ (2013ರಲ್ಲಿ ಅಜೇಯ 224), ರಾಘವಿ ಬಿಸ್ಟ್ (ಅಜೇಯ 219), ಜೆಮಿಮಾ ರೊಡ್ರಿಗಸ್ (ಅಜೇಯ 202) ಮತ್ತು ಸಾನಿಕಾ ಚಾಲ್ಕೆ (200) ಈ ಸಾಧನೆ ಮಾಡಿದ್ದಾರೆ.