ಪ್ರಯಾಗ್‌ರಾಜ್:
ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಐತಿಹಾಸಿಕ ಮಹಾಕುಂಭ ಮೇಳ ವೈಭವಯುತವಾಗಿ ಆರಂಭವಾಗಿದ್ದು, ಮೊದಲ ದಿನವೇ ದೇಶ-ವಿದೇಶಗಳ 40 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಪುಣ್ಯಸ್ನಾನ ಮಾಡಿ ಪುನೀತಗೊಂಡರು.
144 ವರ್ಷಗಳಿಗೊಮ್ಮೆ ನಡೆಯುವ (4 ಗ್ರಹಗಳು ಸರಳ ರೇಖೆಗೆ ಬರುವ ವರ್ಷ) ಮಹಾಕುಂಭಮೇಳ(Maha Kumbh Mela)ಕ್ಕೆ ಸೋಮವಾರ ಗಂಗೆ, ಯಮುನೆ ಮತ್ತು ಪೌರಾಣಿಕ ಸರಸ್ವತಿ ನದಿಗಳು ಕೂಡುವ ತ್ರಿವೇಣಿ ಸಂಗಮವು ಸಾಕ್ಷಿಯಾಯಿತು. ಈ ಐತಿಹಾಸಿಕ ಧಾರ್ಮಿಕ ಸಮ್ಮೇಳನವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಮತ್ತು ಶಾಹಿ ಸ್ನಾನದ ಮೂಲಕ ಎಲ್ಲ ರೀತಿಯ ಪಾಪಗಳಿಂದ ಮುಕ್ತಿ ಪಡೆಯುವ ಸಲುವಾಗಿ ಜಗತ್ತಿನಾದ್ಯಂತದ ಸಾಧು-ಸಂತರು, ಅಘೋರಿಗಳು, ಹಠಯೋಗಿಗಳು, ಸನ್ಯಾಸಿಗಳು, ಸಾಮಾನ್ಯ ನಾಗರಿಕರು ಸಂಗಮಸ್ಥಳಕ್ಕೆ ಬಂದು ಸೇರಿದ್ದಾರೆ.
ಜನವರಿ 13ರಿಂದ ಆರಂಭವಾಗಿರುವ ಮಹಾ ಕುಂಭಮೇಳವು ಫೆಬ್ರವರಿ 26 ರವರೆಗೆ ಅಂದರೆ ಒಟ್ಟು 45 ದಿನಗಳ ಕಾಲ ನಡೆಯಲಿದ್ದು, ಭಾರತದ ಪ್ರಾಚೀನ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳಿಗೆ ಜಾಗತಿಕ ಪ್ರಾಮುಖ್ಯತೆ ಒದಗಿಸಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದ ಸುತ್ತ ಸುಮಾರು 10 ಸಾವಿರ ಎಕರೆಯಷ್ಟು ಪ್ರದೇಶದಲ್ಲಿ ಈ ಮಹಾ ಸಮ್ಮೇಳನ ನಡೆಯುತ್ತಿದೆ. ಕಳೆದ ಬಾರಿಯ ಕುಂಭಮೇಳದಲ್ಲಿ 24 ಕೋಟಿ ಜನರು ಭಾಗವಹಿಸಿದ್ದರೆ, ಈ ಬಾರಿ 45 ಕೋಟಿ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಉತ್ತರಪ್ರದೇಶ ಸರ್ಕಾರ ತಿಳಿಸಿದೆ.
ಕಳೆದ ಬಾರಿ 7,900 ಎಕರೆ ಜಾಗದಲ್ಲಿ ಕುಂಭ ಮೇಳ ನಡೆದರೆ, ಈ ಬಾರಿ 10 ಸಾವಿರ ಎಕರೆಯನ್ನು ಕುಂಭಮೇಳಕ್ಕಾಗಿ ಮೀಸಲಿರಿಸಲಾಗಿದೆ. ಅದೇ ರೀತಿ, ಕಳೆದ ಬಾರಿ ₹3,500 ಕೋಟಿ ವೆಚ್ಚ ಮಾಡಿದ್ದರೆ, ಈ ಬಾರಿ ಉ.ಪ್ರದೇಶ ಸರ್ಕಾರವೊಂದೇ 7,000 ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ.

ಇದು ಗಂಗಾ, ಯಮುನಾ ನದಿಗಳ ಸಂಗಮ ಸ್ಥಳ. ಗುಪ್ತಗಾಮಿನಿಯಾದ ಸರಸ್ವತಿ ನದಿಯೂ ಪ್ರಯಾಗ್‌ರಾಜ್‌ನಲ್ಲಿ ಸಂಗಮಿಸುತ್ತಾಳೆ ಎಂಬ ನಂಬಿಕೆ ಇದೆ. ಪುಷ್ಯ ಪೂರ್ಣಿಮೆಯ ಪವಿತ್ರ ದಿನವಾದ ಸೋಮವಾರ ಶಾಹೀ (ಪವಿತ್ರ) ಸ್ನಾನ ಮಾಡುವುದು ಭಕ್ತಾದಿಗಳ ಬಯಕೆಯಾಗಿದೆ. ಅದರಂತೆ, ಬೆಳಗ್ಗೆಯೇ 40 ಲಕ್ಷ ಮಂದಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. 45 ದಿನಗಳ ಮೇಳದಲ್ಲಿ ಒಟ್ಟು 6 ಶಾಹಿ ಸ್ನಾನ ನಡೆಯಲಿದೆ.
ಭಾರೀ ಚಳಿಯಿದ್ದರೂ, ಬೆಚ್ಚಗಿನ ಅನುಭವ:
ಇಡೀ ಉತ್ತರಪ್ರದೇಶ ಈಗ ಭಾರೀ ಚಳಿಯಿಂದ ನಡುಗುತ್ತಿದೆ. ಗಡ ಗಡ ನಡುಗಿಸುವ ಚಳಿಯನ್ನೂ ಲೆಕ್ಕಿಸದೇ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ವಿದೇಶಿ ಭಕ್ತಾದಿಗಳೂ ಇದರಿಂದ ಹೊರತಾಗಿಲ್ಲ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ವಿದೇಶಿಯರೂ ಭಾವಪರವಶರಾಗಿದ್ದಾರೆ.
“ನಾನು ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೇನೆ. ಮೋಕ್ಷವನ್ನರಸಿ ಇಲ್ಲಿಗೆ ಆಗಮಿಸಿದ್ದೇನೆ. ಇದೊಂದು ಅದ್ಭುತ ಅನುಭವ. ಭಾರತವು ಜಗತ್ತಿನ ಆಧ್ಯಾತ್ಮಿಕ ಹೃದಯವಿದ್ದಂತೆ. ನೀರು ತುಂಬಾ ಶೀತವಾಗಿದ್ದರೂ, ಹೃದಯದೊಳಗೆ ಬೆಚ್ಚಗಿನ ಅನುಭವವಾಗುತ್ತಿದೆ” ಎಂದು ಬ್ರೆಜಿಲ್ ನಿಂದ ಬಂದ ಫ್ರಾನ್ಸಿಸ್ಕೋ ಹೇಳಿದ್ದಾರೆ. ಸ್ಪೇನ್ ನ ಭಕ್ತರೊಬ್ಬರು, “ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಅವಕಾಶ ದೊರೆತಿದ್ದಕ್ಕೆ ನಾನು ಧನ್ಯನಾದೆ” ಎಂದಿದ್ದಾರೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನ ಭಕ್ತರೊಬ್ಬರು, “ಇದೊಂದು ರೋಮಾಂಚಕಾರಿ ಅನುಭವ. ಜನರೂ ಸ್ನೇಹಪರರಾಗಿದ್ದು, ಬೀದಿಗಳೂ ಸ್ವಚ್ಛವಾಗಿವೆ. ನಮಗೆ ಬಹಳ ಸಂತೋಷವಾಗಿದೆ. ನಾವೂ ಸನಾತನ ಧರ್ಮವನ್ನು ಅನುಸರಿಸುತ್ತೇವೆ” ಎಂದಿದ್ದಾರೆ.