ರಾಜ್‌ಕೋಟ್: ಭಾರತ ಮಹಿಳಾ ತಂಡದ ಆಟಗಾರರು ಇತ್ತೀಚೆಗೆ ಹಲವಾರು ಸಾಧನೆಗಳನ್ನು ಮಾಡುತ್ತಿದ್ದಾರೆ. ಅವುಗಳಲ್ಲಿ ವೈಯಕ್ತಿಕ ಹಾಗೂ ತಂಡಗಳ ಸಾಧನೆಯೂ ಸೇರಿಕೊಂಡಿವೆ. ಅಂತೆಯೇ ಎಡಗೈ ಬ್ಯಾಟ್ ಸ್ಮೃತಿ ಮಂಧಾನಾ (Smriti Mandhana) ಹೊಸದೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಅವರು ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 4000 ರನ್‌ಗಳನ್ನು ಪೂರ್ಣಗೊಳಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆ ಸೃಷ್ಟಿಸಿದ್ದಾರೆ.
ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಜನವರಿ 10 ರಂದು ಐರ್ಲೆಂಡ್ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಅವರು ಈ ದಾಖಲೆ ಬರೆದಿದ್ದಾರೆ. ಸ್ಮೃತಿ ಒಡಿಐ ಮಾದರಿಯಲ್ಲಿ 4000 ರನ್‌ಗಳನ್ನು ಪೂರ್ಣಗೊಳಿಸಿದ 15ನೇ ಆಟಗಾರ್ತಿ ಹಾಗೂ ಮಾಜಿ ನಾಯಕ ಮಿಥಾಲಿ ರಾಜ್ ಬಳಿಕ ಎರಡನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪಂದ್ಯದ 9ನೇ ಓವರ್‌ನಲ್ಲಿ ಅರ್ಲೆನ್ ಕೆಲ್ಲಿ ಅವರ ಎಸೆತದಲ್ಲಿ ಒಂದು ರನ್ ಓಡಿದ ಸ್ಮೃತಿ ಈ ಬೃಹತ್ ದಾಖಲೆ ಮಾಡಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅನುಪಸ್ಥಿತಿಯಲ್ಲಿ ಸ್ಮೃತಿ ಮಂಧಾನಾ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಅವರ ಕೇವಲ 29 ಎಸೆತಗಳಲ್ಲಿ 41 ರನ್‌ಗಳನ್ನು ಕಲೆ ಹಾಕಿದರು. ಇದರ ಜೊತೆಗೆ ಅವರು ಪದಾರ್ಪಣೆ ಪಂದ್ಯವಾಡಿದ ಪ್ರತೀಕಾ ರಾವಲ್ ಅವರ ಜೊತೆ 70 ರನ್‌ಗಳ ಜೊತೆಯಾಟ ಆಡಿದ್ದಾರೆ. ಆ ಮೂಲಕ ಭಾರತ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟಿದ್ದರು. ಪಂದ್ಯದಲ್ಲಿ ಭಾರತ ಭರ್ಜರಿ ವಿಜಯ ಸಾಧಿಸಿದೆ.
ಸ್ಮೃತಿ ಮಂಧಾನಾ ಅವರು 4000 ಒಡಿಐ ರನ್‌ಗಳನ್ನು ಪೂರ್ಣಗೊಳಿಸಲು 95 ಇನಿಂಗ್ಸ್ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ 100 ಇನಿಂಗ್ಸ್‌ಗಳ ಒಳಗಾಗಿ 4000 ಒಡಿಐ ರನ್ ಪೂರ್ಣಗೊಳಿಸಿದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಮಿಥಾಲಿ ರಾಜ್ ಅಗ್ರ ಸ್ಥಾನದಲ್ಲಿದ್ದಾರೆ. ಅವರು 7805 ರನ್‌ಗಳನ್ನು ಗಳಿಸಿದ್ದಾರೆ.
ಮಂಧಾನಾಗೆ ಎರಡನೇ ಸ್ಥಾನ,
ಭಾರತ ಮಹಿಳಾ ತಂಡಕ್ಕೆ ಸ್ಮೃತಿ ಮಂಧಾನಾ ಅವರು ಪ್ರಮುಖ ಆಟಗಾರ್ತಿ. ಅವರು 2024ರ ಕ್ಯಾಲೆಂಡರ್ ವರ್ಷದಲ್ಲಿ ಮಹಿಳಾ ಕ್ರಿಕೆಟ್‌ನ ಒಡಿಐ ಮತ್ತು ಟಿ20ಐನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ದಾಖಲೆ ಮಾಡಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಎಲ್ಲಾ ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯೂ ಎಂಬ ಖ್ಯಾತಿ ಹೊಂದಿದ್ದಾರೆ. ಭಾರತ ಆಡಿದ್ದ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ನಾಲ್ಕು ಶತಕಗಳನ್ನು ಬಾರಿಸಿ ಮಿಂಚಿದ್ದಾರೆ. .
2025ರ ಐಸಿಸಿ ಮಹಿಳಾ ಚಾಂಪಿಯನ್‌ಷಿಪ್ ಟೂರ್ನಿಗೂ ಮುನ್ನ ಭಾರತ ಮಹಿಳೆಯರ ತಂಡಕ್ಕೆ ಐರ್ಲೆಂಡ್ ಸವಾ;ಲು ಎದುರಿಸಬೇಕಾಗಿದೆ. ಚಾಂಪಿಯನ್‌ಶಿಪ್‌ಗೂ ಮುನ್ನ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅವರು ಆಡಲಿದ್ದಾರೆ.
ಐರ್ಲೆಂಡ್ ವಿರುದ್ದದ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 6 ವಿಕೆಟ್‌ಗಳಿಂದ ಗೆಲುವು ಪಡೆದಿದೆ. ಇದರೊಂದಿಗೆ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆಯನ್ನು ಪಡೆದುಕೊಂಡು ಸರಣಿ ಗೆಲ್ಲುವುದಕ್ಕೆ ಹೊಂಚು ಹಾಕಿದೆ.