ಉತ್ತರಪ್ರದೇಶದ ಮೀರತ್ ನಲ್ಲೊಂದು ಭೀಕರ ಕೃತ್ಯ
ಲಕ್ನೋ: ಉತ್ತರಪ್ರದೇಶದ ಮೀರತ್ ನ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಕೊಲೆಯ ಭೀಕರತೆಗೆ ಸಾಕ್ಷಿ ಎಂಬಂತೆ, ಮೂವರು ಹೆಣ್ಣುಮಕ್ಕಳ ಮೃತದೇಹವು ಬೆಡ್ ಬಾಕ್ಸ್ ನೊಳಗೆ ಸಿಕ್ಕಿದೆ. ಯಾರೋ ದುಷ್ಕರ್ಮಿಗಳು ಪತಿ, ಪತ್ನಿ ಮತ್ತು 3 ಮಕ್ಕಳನ್ನು ಕೊಂದಿರುವ ಶಂಕೆಯಿದ್ದು, ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು(police) ತಿಳಿಸಿದ್ದಾರೆ. ಮೀರತ್ ನ ಸೊಹೈಲ್ ಗಾರ್ಡನ್ (Sohail Garden) ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಪತಿ ಮೊಯಿನ್ ಮತ್ತು ಅವರ ಪತ್ನಿ ಅಸ್ಮಾ ಅವರ ರಕ್ತಸಿಕ್ತ ಮೃತದೇಹಗಳು ನೆಲದ ಮೇಲೆ ಬಿದ್ದಿದ್ದರೆ, 10 ವರ್ಷದೊಳಗಿನ 3 ಹೆಣ್ಣುಮಕ್ಕಳ ಮೃತದೇಹಗಳು ಬೆಡ್ ಬಾಕ್ಸ್ ನೊಳಗೆ ಪತ್ತೆಯಾಗಿವೆ. ಎಲ್ಲರ ತಲೆಗಳಲ್ಲೂ ಗಾಯದ ಗುರುತುಗಳಿದ್ದು, ಗಟ್ಟಿಯಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿರುವ ಶಂಕೆಯಿದೆ. ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿರುವ ಸಾಧ್ಯತೆಯಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸಾವಿಗೆ ಕಾರಣ ದೃಢಪಡಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಬುಧವಾರದಿಂದಲೂ ಮನೆಯಲ್ಲಿ ಯಾರ ಸುಳಿವೂ ಇರದ ಕಾರಣ, ಅನುಮಾನದ ಮೇರೆಗೆ ನೆರೆಹೊರೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಮನೆಯ ಹೊರಗಿನಿಂದ ಬೀಗ ಹಾಕಲಾಗಿತ್ತು. ಕೊನೆಗೆ ಮೇಲ್ಚಾವಣಿಯ ಮೂಲಕ ಮನೆಯನ್ನು ಪ್ರವೇಶಿಸಿದಾಗ ಘೋರ ಕೃತ್ಯ ಕಂಡು ಪೊಲೀಸರೇ ಬೆಚ್ಚಿಬೀದಿದ್ದಾರೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮೊದಲಿಗೆ ನೆಲದಲ್ಲಿ ಬಿದ್ದಿದ್ದ ಪತಿ, ಪತ್ನಿಯ ರಕ್ತಸಿಕ್ತ ದೇಹಗಳಷ್ಟೇ ಕಂಡುಬಂದಿದ್ದವು. ಹೆಚ್ಚಿನ ಹುಡುಕಾಟ ನಡೆಸಿದಾಗ, ಬೆಡ್ ರೂಂನಲ್ಲಿದ್ದ ಮಂಚದ ಒಳಗಿನ ಬಾಕ್ಸ್ ನೊಳಗೆ 3 ಹೆಣ್ಣುಮಕ್ಕಳ ಶವಗಳನ್ನು ತುರುಕಿಸಿಟ್ಟಿರುವುದನ್ನು ಕಂಡು ಪೊಲೀಸರೇ ಹೌಹಾರಿದರು.