ಕಲಬುರಗಿ: ಇನ್ಶೂರೆನ್ಸ್ ಹಣಕ್ಕಾಗಿ ತಂದೆಯನ್ನೇ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಕಳೆದ 6 ತಿಂಗಳ ಹಿಂದೆಯೇ ತಂದೆಯನ್ನು ಕೊಲೆ ಮಾಡಿ ಮಗ ಅಪಘಾತದ ಕಥೆ ಕಟ್ಟಿದ್ದ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬೆಣ್ಣೂರ್ (ಬಿ) ಕ್ರಾಸ್ ಬಳಿ ನಡೆದಿತ್ತು.
ಮಾಡಬೂಳ ಪೊಲೀಸರು ಅರುಣ್, ಯುವರಾಜ್, ಸತೀಶ್, ರಾಕೇಶ್ ಬಂಧಿತ ಆರೋಪಿಗಳು. ಜುಲೈ 8ರಂದು ಆರೋಪಿ ಸತೀಶ್ ತನ್ನ ತಂದೆ ಕಾಳಿಂಗರಾವ್ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ. ಅಪಘಾತದಲ್ಲಿ ಕಾಳಿಂಗರಾವ್ ಮೃತ ಪಟ್ಟಿದ್ದರೆ , ಸತೀಶ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು.
ಪೊಲೀಸರು ಅಪಘಾತದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. ಆರೋಪಿ ಸತೀಶ್ ಹೊಟೇಲ್ ವ್ಯಾಪಾರ ಮಾಡಿಕೊಂಡಿದ್ದ. ಆದರೆ, ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಹೀಗಾಗಿ ಪಾಪಿ ಮಗ ತಂದೆಯನ್ನೇ ಕೊಲೆ ಮಾಡಿ, ವಿಮೆ ಹಣದ ಮೇಲೆ ಕಣ್ಣಿಟ್ಟಿದ್ದ ಎನ್ನಲಾಗಿದೆ. ತಂದೆಯನ್ನು ಕೊಲೆ ಮಾಡಲು ಮಗನೇ ಸುಪಾರಿ ನೀಡಿದ್ದ. ತಂದೆಯನ್ನು ಕೊಲೆ ಮಾಡಲು ಅರುಣಕುಮಾರ್ ಎಂಬಾತನಿಗೆ ಸುಪಾರಿ ನೀಡಿದ್ದಾನೆ. ನಂತರ ಟ್ರ್ಯಾಕ್ಟರ್ ನಿಂದ ಬೈಕ್ ಗೆ ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದಾರೆ.
ಸತೀಶ ಸಾಲದ ತೀರಿಸುವ ಚಿಂತೆಯಲ್ಲಿದ್ದಾಗ ‘‘ತಂದೆಯ ಹೆಸರಿನಲ್ಲಿ ಎರಡು ಇನ್ಶೂರೆನ್ಸ್ ಮಾಡಿಸಿ ನಂತರ ಅವರನ್ನು ಕೊಲೆ ಮಾಡಬೇಕು. ಅಪಘಾತವೆಂದು ಬಿಂಬಿಸಿ ಇಶ್ಯೂರೆನ್ಸ್ ರೆನ್ಸ್ ಕ್ಲೇಮ್ ಮಾಡಬೇಕು. ಈ ಹಣದಿಂದ ನಿನ್ನ ಸಾಲ ತೀರಿಸಬಹುದು ಅರುಣ್ ಕುಮಾರ್ ಉಪಾಯ ಹೇಳಿದ್ದ ಎನ್ನಲಾಗಿದೆ.
ಅದರಂತೆ ಸತೀಶ್, 2024ರ ಜನವರಿಯಲ್ಲಿ ಶ್ರೀರಾಮ್ ಪೆನ್ಶನ್ ಇಶ್ನೂರೆನ್ಸ್ ಮತ್ತು ನೀವಾ ಭೂಪಾ ಹೆಲ್ತ್ ಇನ್ಸೂರೆನ್ಸ್ ಪಾಲಿಸಿ ಮಾಡಿಸಿದ್ದಾನೆ. 22 ಸಾವಿರ ರೂ. ಪ್ರೀಮಿಯಂ ತುಂಬಿದ್ದಾನೆ. ನಾಮಿನಿ ಕೂಡ ತಾನೇ ಆಗಿದ್ದಾನೆ. ನಂತರ ತಂದೆಯನ್ನೇ ಕೊಲೆ ಮಾಡಲು ಮುಂದಾಗಿದ್ದಾನೆ. ಕೊಲೆ ಮಾಡಲು ಅರುಣಕುಮಾರ ತರಿ ತಾಂಡಾದ ರಾಕೇಶ ಮತ್ತು ಯುವರಾಜನಿಗೆ ತಲಾ 50 ಸಾವಿರ ರೂ. ನೀಡಿದ್ದಾನೆ. ತಾನು 5 ಲಕ್ಷ ರೂ.ಗೆ ಡೀಲ್ ಮಾಡಿಕೊಂಡಿದ್ದಾನೆ.
ಇನ್ನೊಂದೆಡೆ ಮಗ ಸತೀಶ್ ಜುಲೈ 8ರಂದು ತನ್ನ ಸ್ಕೂಟಿ ಮೇಲೆ ತಂದೆಯನ್ನು ಕೂಡಿಸಿಕೊಂಡು ಸಂಜೆ ವೇಳೆ ಪಾಳಾ ಮಾರ್ಗದಲ್ಲಿ ಬಂದಿದ್ದಾನೆ. ಅಲ್ಲಿ ಸ್ಕೂಟಿ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ಹೋಗಿದ್ದಾನೆ. ಆನಂತರ ತಂದೆ ನಿಂತ ಸುದ್ದಿಯನ್ನು ಅರುಣ್ ಕುಮಾರ್ ಗೆ ಮುಟ್ಟಿಸಿದ್ದಾನೆ. ಯುವರಾಜ ಮತ್ತು ರಾಕೇಶ್ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಬಂದು ಕಾಳಿಂಗರಾವ್ ಅವರಿಗೆ ಡಿಕ್ಕಿ ಹೊಡೆಸಿದ್ದಾರೆ. ಅಲ್ಲದೇ, ಈ ಕುರಿತು ಯಾರಿಗೂ ಸಂಶಯ ಬರಬಾರದು ಎಂಬ ಕಾರಣಕ್ಕೆ ರಾಕೇಶ ಮತ್ತು ಯುವರಾಜ ತೆಲೆಗೆ ಗಾಯ ಮಾಡಿಕೊಂಡಿದ್ದಾರೆ. ಸದ್ಯ ಪ್ರಕರಣ ಬೇಧಿಸಿರುವ ಪೊಲೀಸರು ಆರೋಪಿಗಳ ಹೆಡೆಮೂರಿ ಕಟ್ಟಿದ್ದಾರೆ.