ನವದೆಹಲಿ: ಗಡಿಯಲ್ಲಿ ಚೀನಾ ಮತ್ತೊಮ್ಮೆ ಕಿರಿಕ್ ಮಾಡುತ್ತಿದೆ.
ಲಡಾಖ್ ಗೆ ಹೊಂದಿಕೊಂಡಂತೆ ಇರುವ ಆಕ್ರಮಿತ ಹೋಟಾನ್ ಜಿಲ್ಲೆಯಲ್ಲಿ ಎರಡು ಹೊಸ ಕೌಂಟಿ (ಮುನ್ಸಿಪಲ್) ರಚನೆ ಮಾಡಿ ಆದೇಶ ಹೊರಡಿಸಿದೆ. ಈ ಪ್ರದೇಶಗಳಿಗೆ ‘ಹಿಯಾನ್’ ಹಾಗೂ ‘ಹೆಕಾಂಗ್’ ಎಂದು ಕೂಡ ಚೀನಾ ಹೆಸರಿಟ್ಟಿದೆ. ಇದನ್ನು ಭಾರತ ತೀವ್ರವಾಗಿ ವಿರೋಧಿಸಿದೆ.
ಚೀನಾದ ನಡೆ ವಿರೋಧಿಸಿರುವ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್, ನಮ್ಮ ಭೂಭಾಗವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಯತ್ನಿಸುತ್ತಿರುವ ಚೀನಾದ ನಿಲುವನ್ನು ಭಾರತ ಎಂದೂ ಒಪ್ಪಿಲ್ಲ. ಚೀನಾ, ಹೋಟಾನ್ ಪ್ರಾಂತ್ಯದಲ್ಲಿ ರಚಿಸಲು ಹೊರಟಿರುವ 2 ಕೌಂಟಿಯ ಕೆಲ ಭಾಗಗಳು ಭಾರತದ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ ನಲ್ಲಿವೆ ಎಂದು ಹೇಳಿದ್ದಾರೆ.
ನೂತನ ಪ್ರಾಂತ್ಯಗಳನ್ನು ರಚಿಸುವ ಮೂಲಕ ಚೀನಾ ಭಾರತದ ಸಾರ್ವಭೌಮತ್ವದ ಮೇಲೆ ನಿಯಂತ್ರಣ ಹೇರಲು ಸಾಧ್ಯವಿಲ್ಲ. ಚೀನಾದ ಅಕ್ರಮ ಹಾಗೂ ಬಲವಂತದ ಅತಿಕ್ರಮಣಕ್ಕೆ ಭಾರತ ಯಾವುದೇ ಕಾರಣಕ್ಕೆ ಬಗ್ಗುವುದಿಲ್ಲ. ಈ ಕುರಿತು ನಮ್ಮ ವಿರೋಧವನ್ನು ರಾಜತಾಂತ್ರಿಕ ಮಾಧ್ಯಮಗಳ ಮೂಲಕ ಚೀನಾಗೂ ತಿಳಿಸಲಾಗಿದೆ ಎಂದಿದ್ದಾರೆ.
1962ರ ಸಂದರ್ಭದಲ್ಲಿ ಭಾರತದ ಮೇಲೆ ಚೀನಾ ದಾಳಿ ಮಾಡಿದ್ದಾಗ ಅಕ್ಸಾನ್‌ಚಿನ್ ಒಳಗೊಂಡಂತ ಲಡಾಖ್‌ನ ಹಲವು ಭಾಗಗಳನ್ನು ಅದು ಅತಿಕ್ರಮಿಸಿತ್ತು. ಈಗ ಮತ್ತೆ ಕ್ಯಾತೆ ತೆಗೆದಿದೆ.