ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡನ ಬರ್ಬರ ಹತ್ಯೆ ನಡೆದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ನಗರದ ತಮ್ಮನಾಯಕನಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಲಾಂಗ್ ನಿಂದ ಕೊಚ್ಚಿ ಜೆಡಿಎಸ್ (JDS) ಮುಖಂಡ ಗ್ರಾಮದ ವೆಂಕಟೇಶ್ ಅಲಿಯಾಸ್ ಗೋಲ್ಡ್ (50) ಎಂಬುವವರನ್ನು ಕೊಲೆ ಮಾಡಿದ್ದಾರೆ. ಕೊಲೆಯಾಗಿರುವ ವೆಂಕಟೇಶ್ ಶುಕ್ರವಾರ ಬೈಕ್ ನಲ್ಲಿ ತಮ್ಮನಾಯಕನಹಳ್ಳಿ ಗೇಟ್ ನಿಂದ ಮನೆಗೆ ತೆರಳುತ್ತಿದ್ದಾಗ ದಾಳಿ ನಡೆಸಿರುವ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವೆಂಕಟೇಶ್ ನಾಯಕನಹಳ್ಳಿ ಗೇಟ್ ನಲ್ಲಿರುವ ಮೆಡಿಕಲ್ ಸ್ಟೋರ್ ನಿಂದ ಮನೆಗೆ ತೆರಳುತ್ತಿದ್ದಾಗ ಅಡ್ಡ ಬಂದು ಲಾಂಗ್ ನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ವೆಂಕಟೇಶ್ ಎಡಗೈ ತೋಳಿನ ಭಾಗ ಕಟ್ ಆಗಿದೆ. ಮನಸೋ ಇಚ್ಛೆ ಲಾಂಗ್ ಬೀಸಿದ್ದರಿಂದಾಗಿ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಮ್ಮೂರಿನ ರಸ್ತೆ ಹತ್ತಿರ ಇರುವ ಬಾರ್ ಬಳಿ ಅಕ್ಕ ಪಕ್ಕದ ಗ್ರಾಮದ ಯುವಕರು ಕುಡಿದು ಗಲಾಟೆ ಮಾಡುತ್ತಿದ್ದರು. ಮೂರು ದಿನಗಳ ಹಿಂದೆ ಬೈದು ಬುದ್ದಿವಾದ ಹೇಳಿದ್ದರು. ಹೀಗಾಗಿ ಕೊಲೆ ನಡೆದಿರಬಹುದು ಎಂದು ಕುಟುಂಬಸ್ಥರು ಶಂಕಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.