ನವದೆಹಲಿ: ಭಾರತವು ರಫ್ತಿನ ವಿಷಯದಲ್ಲಿ ಹಲವು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡುತ್ತಿದೆ. ಚಹಾ ರಫ್ತಿನಲ್ಲಿ ಹೆಸರು ಮಾಡಿದ್ದ ಭಾರತ ಈಗ ಕಾಫಿ ರಫ್ತಿನಲ್ಲೂ ಗಮನಾರ್ಹ ಸಾಧನೆ ಮಾಡಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಕಾಫಿ ರಫ್ತು 1 ಬಿಲಿಯನ್ ಡಾಲರ್ ನ ಗಡಿ ದಾಟಿದೆ. ಕಳೆದ ಬಾರಿಯ ಹಣಕಾಸು ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ಬಾರಿ ಶೇ. 29ರಷ್ಟು ರಫ್ತು ಹೆಚ್ಚಳ ಆಗಿದೆ. ಇದೇ ಮೊದಲ ಬಾರಿಗೆ ಭಾರತ ಈ ಸಾಧನೆ ಮಾಡಿದೆ. 2024ರ ಏಪ್ರಿಲ್ ನಿಂದ ನವೆಂಬರ್ ವರೆಗೆ ಭಾರತದಿಂದ ರಫ್ತಾದ ಕಾಫಿಯ ಮೌಲ್ಯ 1,146.9 ಮಿಲಿಯನ್ ಡಾಲರ್ ಎಂದು ತಿಳಿದು ಬಂದಿದೆ.
ಅರೇಬಿಕಾ ಮತ್ತು ರೋಬಸ್ಟಾ ಎಂಬ ಎರಡು ವಿಧದ ಕಾಫಿಗಳನ್ನು ಭಾರತದಿಂದ ರಫ್ತು ಮಾಡಲಾಗುತ್ತದೆ. ಇದರಲ್ಲಿ ರೋಬಸ್ಟಾ ಕಾಫಿಯ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ರೋಬಸ್ಟಾ ಕಾಫಿಯನ್ನು ಹೆಚ್ಚಾಗಿ ಬೆಳೆಯುವ ಬ್ರೆಜಿಲ್ ಮತ್ತು ವಿಯೆಟ್ನಾಂ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಕಾಫಿ ಬೆಲೆ ದುಬಾರಿಯಾಗಿದೆ. ಹೀಗಾಗಿ ರೋಬಸ್ಟಾ ಕಾಫಿಯಲ್ಲಿ ಶೇ. 63ರಷ್ಟು ಬೆಲೆ ಹೆಚ್ಚಾಗಿದೆ.
ಕರ್ನಾಟಕ ಸೇರಿದಂತೆ ಮೂರು ದಕ್ಷಿಣ ರಾಜ್ಯಗಳಲ್ಲಿ ಅತಿಹೆಚ್ಚು ಕಾಫಿ ಬೆಳೆಯಲಾಗುತ್ತದೆ. ಇಲ್ಲಿ ಅರೇಬಿಕಾ ಮತ್ತು ರೋಬಸ್ಟಾ ಈ ಎರಡೂ ತಳಿಯೂ ಬೆಳೆಯುತ್ತವೆ. ಜಾಗತಿಕವಾಗಿ ಕಾಫಿಗೆ ಈ ವರ್ಷ ಇರುವ ಹೆಚ್ಚು ಬೇಡಿಕೆಯು ಭಾರತದ ಕಾಫಿ ರಫ್ತಿಗೆ ಒಳ್ಳೆಯ ಪುಷ್ಟಿ ಕೊಟ್ಟಿದೆ.