ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕೇಳಿ ಬಂದಿರುವ ಅತ್ಯಾಚಾರ, ಹನಿಟ್ರ್ಯಾಪ್ (Honeytrap) ಆರೋಪ ತನಿಖೆಯಲ್ಲಿ ಸಾಬೀತಾಗಿದೆ ಎಂದು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಿಐಡಿ ವಿಶೇಷ ತನಿಖಾ ತಂಡ (SIT) ಆರೋಪ ಪಟ್ಟಿ ಸಲ್ಲಿಸಿದೆ.
ವಿರೋಧಿಗಳನ್ನು ಹೆಚ್ ಐವಿ-ಏಡ್ಸ್ ಪೀಡಿತರ ಮೂಲಕ ಹನಿಟ್ರ್ಯಾಪ್ ಬಲಗೆ ಬೀಳಿಸಿ ಏಡ್ಸ್ ಹರಡಲು ಯತ್ನಿಸಿದ್ದರು ಎಂದು ಎಸ್ ಐಟಿ ಸಲ್ಲಿಸಿದ ಚಾರ್ಜ್ಶೀಟ್ ನಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ.
ಅಲ್ಲದೇ, ಶಾಸಕ ಮುನಿರತ್ನ ಕೃತ್ಯಕ್ಕೆ ನೆರವು ನೀಡಿದ ಆರೋಪದ ಹೊತ್ತಿರುವ ಎ3 ಸುಧಾಕರ್, ಎ7 ಪಿ.ಶ್ರೀನಿವಾಸ್ ಮತ್ತು ಎ8 ಇನ್ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ವಿರುದ್ಧ ಕೂಡ ಆಪಾದನೆ ಸಾಬೀತಾಗಿದೆ.
ಸೆ. 18ರಂದು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು 7 ಜನ ಆರೋಪಿಗಳ ವಿರುದ್ಧ ಅತ್ಯಾಚಾರ ಆರೋಪದ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆಗೆ ಸರ್ಕಾರ ಎಸ್ ಐಟಿ ರಚಿಸಿತ್ತು. ಈ ಕುರಿತು ತನಿಖೆ ಕೂಡ ನಡೆದಿತ್ತು. ಈಗ ಆರೋಪ ಸಾಬೀತಾಗಿದ್ದು, ಆರೋಪ ಪಟ್ಟಿ ಸಲ್ಲಿಕೆಯಾಗಿದೆ.