ಡಾ. ಮನಮೋಹನ್ ಸಿಂಗ್ 33 ವರ್ಷಗಳ ರಾಜಕೀಯ ಪಯಣದಲ್ಲಿ ಸಂಚರಿಸಿ, ಎರಡು ಬಾರಿ ಪ್ರಧಾನಿಯಾದವರು. ಆದರೆ, ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಮಾತ್ರ ಒಂದೇ ಬಾರಿ.
ಇದು ಅಚ್ಚರಿಯಾದರೂ ಸತ್ಯ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭಾರತದಲ್ಲಿ ಆರ್ಥಿಕ ಸುಧಾರಣೆಗಳ ಪಿತಾಮಹ ಎಂದೇ ಕರೆಯಲಾಗುತ್ತದೆ. ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಗುರುವಾರ ತಡರಾತ್ರಿ ಆರೋಗ್ಯ ತೀವ್ರವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
1991 ರಲ್ಲಿ ಹಣಕಾಸು ಸಚಿವರಾಗಿ, ಉದಾರೀಕರಣದ ಮೂಲಕ ಭಾರತದ ಆರ್ಥಿಕತೆಗೆ ಹೊಸ ದಿಕ್ಕನ್ನು ನೀಡಿದ್ದರು. ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್, ತಮ್ಮ ಮೂರೂವರೆ ದಶಕಗಳ ರಾಜಕೀಯ ಪಯಣದಲ್ಲಿ ಒಮ್ಮೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೂ ಗೆಲುವಿನ ರುಚಿ ಸಿಕ್ಕಿರಲಿಲ್ಲ.
ಮನಮೋಹನ್ ಸಿಂಗ್ 1991 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿ ಹಣಕಾಸು ಸಚಿವರಾದಾಗ ರಾಜ್ಯಸಭೆಯ ಮೂಲಕ ಸಂಸತ್ತಿಗೆ ಹೋಗಿದ್ದರು. ನಂತರ ರಾಜಕೀಯದಲ್ಲಿ ರಾಜ್ಯಸಭೆಯ ಮೂಲಕವೇ ಅವರು ಗುರುತಿಸಿಕೊಂಡಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ರಾಜಕೀಯ ಜೀವನದಲ್ಲಿ ಒಮ್ಮೆ ಮಾತ್ರ ಚುನಾವಣೆಗೆ ಸ್ಪರ್ಧಿಸಿದ್ದರು, ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ. 1999ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 1996 ರಿಂದ ಅಧಿಕಾರದಿಂದ ಹೊರಗುಳಿದಿದ್ದ ಕಾಂಗ್ರೆಸ್ ನ್ನು ಮರಳಿ ತರಲು ಸೋನಿಯಾ ಗಾಂಧಿ ತಮ್ಮ ಎಲ್ಲ ಹಿರಿಯ ನಾಯಕರನ್ನು ಚುನಾವಣೆಯಿಂದ ಕಣಕ್ಕಿಳಿಸಲು ನಿರ್ಧರಿಸಿದ್ದರು. ಹೀಗಾಗಿ ಮನಮೋಹನ್ ಸಿಂಗ್ ಕೂಡ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಕೊಂಡಿದ್ದರು. 1999 ರಲ್ಲಿ ಕಾಂಗ್ರೆಸ್ ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಮನಮೋಹನ್ ಸಿಂಗ್ ಗೆ ಟಿಕೆಟ್ ನೀಡಿತ್ತು.
ಸಿಖ್-ಮುಸ್ಲಿಂ ಮತಗಳ ಸಮೀಕರಣದಿಂದಾಗಿ ಅವರಿಗೆ ಅಲ್ಲಿ ಟಿಕೆಟ್ ನೀಡಲಾಗಿತ್ತು. ಆದರೆ, ಮನಮೋಹನ್ ಸಿಂಗ್ ಮತ್ತು ವಿಜಯ್ ಕುಮಾರ್ ಮಲ್ಹೋತ್ರಾ ನಡುವೆ ಚುನಾವಣೆ ನಡೆಯಿತು. ಮನಮೋಹನ್ ಸಿಂಗ್ ಅವರನ್ನು ಹೊರಗಿನ ಅಭ್ಯರ್ಥಿ ಎಂದು ಪರಿಗಣಿಸಿ ಸ್ಥಳೀಯ ಕಾಂಗ್ರೆಸ್ ನಾಯಕರು ಬಲವಾಗಿ ಬೆಂಬಲಿಸಲಿಲ್ಲ. ಹೀಗಾಗಿ ಮನಮೋಹನ್ ಸಿಂಗ್ ಸೋಲು ಕಂಡಿದ್ದರು. ಆ ಚುನಾವಣೆಯಲ್ಲಿ ಸುಮಾರು 30 ಸಾವಿರ ಮತಗಳಿಂದ ಮನಮೋಹನ್ ಸಿಂಗ್ ಸೋಲು ಕಂಡಿದ್ದರು. ಆನಂತರ ಅವರು ರಾಜ್ಯಸಭಾ ಸ್ಥಾನದಲ್ಲಿ ಉಳಿದರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ನಿರ್ವಹಿಸಿದರು. 2004ರಲ್ಲೂ ಅವರಿಗೆ ಟಿಕೆಟ್ ಸಿಕ್ಕಿತ್ತು. ಆದರೆ, ಅವರು ಸ್ಪರ್ಧಿಸಲಿಲ್ಲ. ಆದರೆ, ಪ್ರಧಾನಿಯಾಗಿ 10 ವರ್ಷ ದೇಶ ಮುನ್ನಡೆಸಿದರು.