ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದ ಮೊದಲ ದಿನ ಆಸ್ಟ್ರೇಲಿಯಾ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಉಸ್ಮಾನ್ ಖ್ವಾಜಾ ಹಾಗೂ ಸ್ಯಾಮ್ ಕೊನ್ಸ್ಟಾಸ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 89 ರನ್ ಗಳ ಕೊಡುಗೆ ನೀಡಿತು. ನಂತರ ಕೊನ್ಸ್ಟಾಸ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 60 ರನ್ ಗಳಿಗೆ ಔಟ್ ಆದರು.
ನಂತರ ಜೊತೆಗೂಡಿದ ಉಸ್ಮಾನ್ ಖ್ವಾಜಾ ಹಾಗೂ ಮಾರ್ನಸ್ ಲಾಬುಶೇನ್ ದ್ವಿತೀಯ ವಿಕೆಟ್ ಗಳ ಅರ್ಧಶತಕದ ಜೊತೆಯಾಟ ನೀಡಿದರು. 121 ಎಸೆತಗಳಲ್ಲಿ 57 ರನ್ ಬಾರಿಸಿದ್ದ ಖ್ವಾಜಾ ಬುಮ್ರಾ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದರು. ಮಾರ್ನಸ್ ಲಾಬುಶೇನ್ 145 ಎಸೆತಗಳಲ್ಲಿ 7 ಫೋರ್ ಗಳೊಂದಿಗೆ 72 ರನ್ ಗಳಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟೀವ್ ಸ್ಮಿತ್ ಕೂಡ ಅರ್ಧ ಶತಕ ಸಿಡಿಸಿದರು.
ಮಾರ್ನಸ್ ಲಾಬುಶೇನ್ (72) ಔಟಾದ ಬಳಿಕ ಆಗಮಿಸಿದ ಟ್ರಾವಿಸ್ ಹೆಡ್ (0) ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಮಿಚೆಲ್ ಮಾರ್ಷ್ (4) ಔಟ್ ಆದರು. ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ಸ್ಟೀವ್ ಸ್ಮಿತ್ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಜೊತೆಗೂಡಿ 6ನೇ ವಿಕೆಟ್ ಗೆ 53 ರನ್ ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಆಕಾಶ್ ದೀಪ್ ಎಸೆದ ಎಸೆತದಲ್ಲಿ ಅಲೆಕ್ಸ್ ಕ್ಯಾರಿ (31) ಔಟಾದರು. ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತ ಸ್ಟೀವ್ ಸ್ಮಿತ್ 68 ರನ್ಗಳೊಂದಿಗೆ ಅಜೇಯರಾಗಿ ಉಳಿದಿದ್ದಾರೆ.
ಹೀಗಾಗಿ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 6 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ 3, ಆಕಾಶ್ ದೀಪ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.