ಬೆಂಗಳೂರು:: ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಐವರು ಯೋಧರು ಹುತಾತ್ಮರಾಗಿ, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಕರ್ನಾಟಕ ಮೂಲದ ಮೂವರು ಯೋಧರು ಹುತಾತ್ಮರಾಗಿರುವುದು ನೋವಿನ ಸಂಗತಿ.
ಮಂಗಳವಾರ ಪೂಂಚ್ ಜಿಲ್ಲೆಯ ಮೆಂಧರ್ ನ ಬಲ್ನೋಯಿ ಪ್ರದೇಶದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ವಾಹನ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಐವರು ಯೋಧರು ಹುತಾತ್ಮರಾಗಿದ್ದರು. ಈ ಪೈಕಿ ಕರ್ನಾಟಕದ ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಿವಾಸಿ ಮಹೇಶ್ ಮಾರಿಗೊಂಡ (25), ಬೆಳಗಾವಿ ತಾಲೂಕಿನ ಪಂತನಗರದ ಯೋಧ ದಯಾನಂದ ತಿರಕಣ್ಣವರ (44, ಕುಂದಾಪುರದ ಅನೂಪ್ ಹುತಾತ್ಮರಾಗಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ”ಜಮ್ಮು ಕಾಶ್ಮೀರದ ಪೂಂಛ್ ಬಳಿ ಸೇನಾ ವಾಹನ ಅಪಘಾತಕ್ಕೀಡಾಗಿ ಕನ್ನಡಿಗ ಯೋಧರಾದ ದಯಾನಂದ ತಿರಕಣ್ಣವರ, ಅನೂಪ್ ಹಾಗೂ ಮಹೇಶ್ ಮರಿಗೊಂಡ ಹುತಾತ್ಮರಾದ ಸುದ್ದಿ ತಿಳಿದು ನೋವಾಯಿತು. ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇಶ ಸೇವೆಗಾಗಿ ಜೀವ ಮುಡಿಪಿಟ್ಟ ಈ ಹುತಾತ್ಮ ಯೋಧರ ತ್ಯಾಗ, ಬಲಿದಾನವನ್ನು ನಾಡು ಸದಾಕಾಲ ಸ್ಮರಿಸಲಿದೆ ಎಂದು ಬರೆದುಕೊಂಡಿದ್ದಾರೆ.