ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧ ಶತಕ ಸಿಡಿಸಿರುವ ಸ್ಮೃತಿ ಮಂಧಾನ ಭರ್ಜರಿ ದಾಖಲೆ ಬರೆದಿದ್ದಾರೆ.
ಮೊದಲ ಪಂದ್ಯವನ್ನು ಈಗಾಗಲೇ ಭಾರತೀಯ ಮಹಿಳಾ ತಂಡ ಭರ್ಜರಿಯಾಗಿ ಗೆದ್ದು ಬೀಗಿದೆ. ಭಾರತ ಪಡೆ ವೆಸ್ಟ್ ಇಂಡೀಸ್ ತಂಡಕ್ಕೆ 314 ರನ್ ಗಳ ಬೃಹತ್ ಗುರಿ ನೀಡಿತ್ತು. ಸ್ಮೃತಿ ಮಂಧಾನ ಆಕರ್ಷಕ ಅರ್ಧಶತಕ ಸಿಡಿಸಿದ ಪರಿಣಾಮ ಭಾರತೀಯ ತಂಡ ಈ ಮೊತ್ತ ದಾಖಲಿಸುವಂತಾಗಿತ್ತು. ಸ್ಫೋಟಕ ಬ್ಯಾಟಿಂಗ್ ಮಾಡಿದ ಮಂಧಾನ ಕೇವಲ ಒಂಬತ್ತು ರನ್ ಗಳಿಂದ ಶತಕ ವಂಚಿತರಾದರು.
ಈ ಮೂಲಕ ಸ್ಮೃತಿ ಈ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಮೊದಲ ಮಹಿಳಾ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಈ ವರ್ಷ ಅದ್ಭುತವಾಗಿ ಬ್ಯಾಟ್ ಬೀಸುತ್ತಿರುವ ಸ್ಮೃತಿ ಮಂಧಾನ ಮೂರು ಮಾದರಿಯ ಕ್ರಿಕೆಟ್ ನಲ್ಲಿ 1602 ರನ್ ಕಲೆ ಹಾಕಿದ್ದಾರೆ.
ಈ ಮೂಲಕ ಒಂದು ವರ್ಷದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್ 1593 ರನ್ ಗಳಿಸಿದ್ದಾರೆ. ಅಲ್ಲದೇ, ಈ ಪಂದ್ಯದಲ್ಲಿ ಮಂಧಾನ ಶತಕ ಸಿಡಸಿದ್ದರೆ, ಇದು ಅವರ ಈ ವರ್ಷದ 6ನೇ ಶತಕವಾಗುತ್ತಿತ್ತು. ಅಲ್ಲದೇ, ಏಕದಿನದಲ್ಲಿ ದಾಖಲೆಯ 10ನೇ ಶತಕವಾಗುತ್ತಿತ್ತು.