ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಭಾರತೀಯ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದ್ದಾರೆ.
ಈ ಮೂಲಕ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಆಟಗಾರ್ತಿಯರು ಬರೆದಿದ್ದ ದಾಖಲೆಗಳನ್ನು ಮುರಿದಿದ್ದಾರೆ. ವಿಂಡೀಸ್ ವಿರುದ್ಧದ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಅರ್ಧಶತಕ ಬಾರಿಸುವುದರೊಂದಿಗೆ ಟಿ20 ಕ್ರಿಕೆಟ್ ನಲ್ಲಿ ಒಂದೇ ವರ್ಷ ಅತ್ಯಧಿಕ ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಭಾರತೀಯ ಮಾಜಿ ಆಟಗಾರ್ತಿ ಮಿಥಾಲಿ ರಾಜ್ ಹೆಸರಿನಲ್ಲಿತ್ತು.
2018 ರಲ್ಲಿ ಭಾರತ ತಂಡದ ಮಾಜಿ ನಾಯಕ ಮಿಥಾಲಿ ರಾಜ್ 7 ಅರ್ಧಶತಕ ಗಳಿಸಿದ ಸಾಧನೆ ಮಾಡಿದ್ದರು. ಈಗ ಸ್ಮೃತಿ ಮಂಧಾನ ಈ ದಾಖಲೆ ಅಳಿಸಿ ಹಾಕಿದ್ದಾರೆ. ಸ್ಮೃತಿ ಮಂಧಾನ ಈ ವರ್ಷ ಟಿ20 ಕ್ರಿಕೆಟ್ ನಲ್ಲಿ ಬರೋಬ್ಬರಿ 8 ಅರ್ಧಶತಕ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಒಂದೇ ವರ್ಷ ಅತ್ಯಧಿಕ ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ 77 ರನ್ ಗಳಿಸುವುದರ ಮೂಲಕ ಟಿ20 ಅಂಗಳದಲ್ಲಿ ಒಂದೇ ವರ್ಷ ಅತ್ಯಧಿಕ ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಚಾಮರಿ ಅಟಾಪಟ್ಟು ಹೆಸರಿನಲ್ಲಿತ್ತು. ಶ್ರೀಲಂಕಾದ ಚಾಮರಿ ಅಟಾಪಟ್ಟು ಈ ವರ್ಷ 21 ಪಂದ್ಯಗಳಲ್ಲಿ 720 ರನ್ ಗಳಿಸಿದ್ದಾರೆ. ಈಗ ಈ ದಾಖಲೆ ಮುರಿದ ಸ್ಮೃತಿ ಅಗ್ರಸ್ಥಾನ ತಲುಪಿದ್ದಾರೆ.
ಈ ವರ್ಷ 23 ಟಿ20 ಆಡಿರುವ ಸ್ಮೃತಿ ಮಂಧಾನ 8 ಅರ್ಧ ಶತಕಗಳೊಂದಿಗೆ 42.4 ಸರಾಸರಿಯಲ್ಲಿ ಒಟ್ಟು 763 ರನ್ ಗಳಿಸಿದ್ದಾರೆ. ಅಲ್ಲದೇ, ಇದರ ಜೊತೆಗೆ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು 50+ ಸ್ಕೋರ್ ಕಲೆಹಾಕಿದ ವಿಶ್ವ ದಾಖಲೆ ಬರೆದಿದ್ದಾರೆ. ಇಲ್ಲಿಯವರೆಗೆ ಈ ದಾಖಲೆ ನ್ಯೂಜಿಲೆಂಡ್ ನ ಸುಝಿ ಬೆಟ್ಸ್ (29 ಬಾರಿ) ಹೆಸರಿನಲ್ಲಿತ್ತು. ಈಗ 30ನೇ ಬಾರಿ ಐವತ್ತಕ್ಕಿಂತ ಹೆಚ್ಚು ರನ್ ಗಳಿಸುವ ಮೂಲಕ ಸ್ಮೃತಿ ಹೊಸ ದಾಖಲೆ ಬರೆದಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಒಂದೇ ವರ್ಷ ಅತೀ ಹೆಚ್ಚು ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಸ್ಮೃತಿ ಮಂಧಾನ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ನ್ಯಾಟ್ ಸ್ಕಿವರ್-ಬ್ರಂಟ್, ಸೋಫಿ ಡಿವೈನ್ ಸೇರಿದಂತೆ 7 ಬ್ಯಾಟರ್ ಗಳ ಹೆಸರಿನಲ್ಲಿತ್ತು. ಅವರು ಒಂದೇ ವರ್ಷ 3 ಏಕದಿನ ಶತಕಗಳನ್ನು ಗಳಿಸಿದ್ದರು. ಆದರೆ, ಮಂಧಾನ 4 ಶತಕ ಗಳಿಸುವುದರ ಮೂಲಕ ಈ ದಾಖಲೆ ಮುರಿದಿದ್ದಾರೆ.