ಭಾರತ, ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯ
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ 5ನೇ ದಿನ ಮಳೆಯಿಂದಾಗಿ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.
ಕೊನೆಯ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು ಭಾರತಕ್ಕೆ 275 ರನ್ ಗಳ ಗುರಿ ನೀಡಿತ್ತು. ಆದರೆ, ಅಂತಿಮ ದಿನದಾಟಕ್ಕೂ ವರುಣ ಅವಕೃಪೆ ತೋರಿದ್ದಾನೆ. ಹೀಗಾಗಿ ಅಂಪೈರ್ 5ನೇ ದಿನದಾಟ ಡ್ರಾದಲ್ಲಿ ಕೊನೆಯಾಗಿದೆ.
ಇದಕ್ಕೂ ಮುನ್ನ ಪರ್ತ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 295 ರನ್ ಗಳ ಭರ್ಜರಿ ಜಯ ಸಾಧಿಸಿತ್ತು. ಅಡಿಲೇಡ್ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 10 ವಿಕೆಟ್ಗಳ ಗೆಲುವು ದಾಖಲಿಸಿದೆ. ಮೂರನೇ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿರುವ ಕಾರಣ, ಸರಣಿ ಜಯಿಸಲು ಮುಂದಿನ ಎರಡು ಪಂದ್ಯಗಳು ನಿರ್ಣಾಯಕ. ಈ ಹಿನ್ನೆಲೆಯಲ್ಲಿ ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ನಡೆಯಲಿರುವ 4ನೇ ಮತ್ತು 5ನೇ ಪಂದ್ಯದಲ್ಲಿ ಭಾರೀ ಪೈಪೋಟಿ ಕಂಡು ಬರಲಿದೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ (152) ಹಾಗೂ ಸ್ಟೀವ್ ಸ್ಮಿತ್ (101) ಶತಕ ಸಿಡಿಸಿ ಮಿಂಚಿದ್ದರು. ಪರಿಣಾಮವಾಗಿ ಮೊದಲ ಇನಿಂಗ್ಸ್ ನಲ್ಲಿ 445 ರನ್ ಗಳಿಸಿತು. ಭಾರತದ ಪರ ಬುಮ್ರಾ 6 ವಿಕೆಟ್ ಕಬಳಿಸಿ ಮಿಂಚಿದರು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಕೆ.ಎಲ್. ರಾಹುಲ್ (84) ಹಾಗೂ ರವೀಂದ್ರ ಜಡೇಜಾ (77) ಅವರ ಅರ್ಧ ಶತಕದ ನೆರವಿನಿಂದ 260 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 7 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿ, ಡಿಕ್ಲೇರ್ ಘೋಷಿಸಿತು. ಹೀಗಾಗಿ ಭಾರತ ತಂಡಕ್ಕೆ 275 ರನ್ ಗಳ ಗೆಲುವಿನ ಗುರಿ ನೀಡಲಾಯಿತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಭಾರ ತಂಡ 8 ರನ್ ಗಳಿಸಿದ್ದ ವೇಳೆ ಬ್ಯಾಡ್ ಲೈಟ್ ನಿಂದ ಪಂದ್ಯ ಸ್ಥಗಿತವಾಯಿತು. ನಂತರ ಅಂಪೈರ್ ಐದನೇ ದಿನದಾಟವನ್ನು ರದ್ದುಗೊಳಿಸಿದರು. ಹೀಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.