ನವದೆಹಲಿ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಲೋಕಸಭಾ ಅಧಿವೇಶನದಲ್ಲಿ ವೀರ ಸಾವರ್ಕರ್ ವಿರುದ್ಧ ಮಾತನಾಡಿದ್ದರು. ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ.
ರಾಹುಲ್ ಗಾಂಧಿ ಅವರು, ಮನುಸ್ಮೃತಿಯೇ ಕಾನೂನು ಎಂದು ಪರಿಗಣಿಸಿದ್ದ ವೀರ ಸಾವರ್ಕರ್ ಸಂವಿಧಾನ ಕಡೆಗಣಿಸಿದ್ದರು. ಸಂವಿಧಾನವನ್ನು ಗೌರವಿಸುತ್ತೇವೆ ಎನ್ನುತ್ತಿರುವ ಬಿಜೆಪಿ ನಾಯಕರು ಈ ಮೂಲಕ ವೀರ ಸಾವರ್ಕರ್ ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಈ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ವೀರ ಸಾವರ್ಕರ್ ಭಾರತದ ಹೆಮ್ಮೆಯ ಪುತ್ರ ಎಂದು ಬರೆದಿದ್ದ ಪತ್ರವೊಂದನ್ನು ಹಂಚಿಕೊಂಡಿದೆ. ಈ ಪತ್ರ ಮುಂದಿಟ್ಟುಕೊಂಡು ಹಾಗಾದರೆ ನಿಮ್ಮ ಅಜ್ಜಿಯೂ ಸಂವಿಧಾನದ ವಿರುದ್ಧವೇ? ಸಾವರ್ಕರ್ ವಿರುದ್ಧ ಮಾತನಾಡುವ ಅಭ್ಯಾಸ ನಿಮಗಿದೆ. ನಾವು ಸಾವರ್ಕರ್ ಅವರನ್ನು ಹೊಗಳಲು ಹೆಮ್ಮೆ ಪಡುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ.
ಇದಕ್ಕೂ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಅಜ್ಜಿಯೊಂದಿಗೆ ಮಾತನಾಡಿದ್ದೆ. ಸಾವರ್ಕರ್ ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಅಜ್ಜಿ ಹೇಳಿದ್ದರು. ಪತ್ರ ಬರೆದು ಬ್ರಿಟಿಷರಿಂದ ಕ್ಷಮೆ ಕೇಳಿದ್ದರು ಎಂದೂ ಹೇಳಿದ್ದರು. ಗಾಂಧೀಜಿ ಮತ್ತು ನೆಹರೂಜಿ ಜೈಲಿಗೆ ಹೋದರು, ಆದರೆ ಸಾವರ್ಕರ್ ಕ್ಷಮೆ ಕೇಳಿ ಬಚಾವ್ ಆದರು ಎಂದು ಹೇಳಿದ್ದರು. ಇದು ನಮ್ಮ ಅಜ್ಜಿಯ ನಿಲುವಾಗಿತ್ತು ಎಂದು ಹೇಳಿದ್ದಾರೆ.