ಭಾರತದ ಡಿ. ಗುಕೇಶ್ ವಿಶ್ವ ಚಾಂಪಿಯನ್ ಶಿಪ್ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಗುರುವಿನ ಹಾದಿಯಲ್ಲಿ ಸಾಗುತ್ತಿದ್ದಾರೆ.
ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್ ವಿಶ್ವ ಚಾಂಪಿಯನ್ ಶಿಪ್ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಪ್ರಶಸ್ತಿ ಪಡೆಯುವುದರ ಮೂಲಕ 18ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಲ್ಲದೇ, ಈ ವರ್ಷದಲ್ಲಿ ಹ್ಯಾಟ್ರಿಕ್ ಸಾಧನೆಗೂ ಪಾತ್ರರಾಗಿದ್ದಾರೆ.
18ರ ಹರೆಯದ ಗುಕೇಶ್ ಅವರು ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ಶಿಪ್ ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸುವ ಮೂಲಕ ಪ್ರಪಂಚದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಭಾರತದ ಮೊದಲ ಮತ್ತು ಶ್ರೇಷ್ಠ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ನಂತರ ಈ ಪ್ರಶಸ್ತಿ ಗೆದ್ದ ಎರಡನೇ ಭಾರತೀಯ ಎಂಬ ದಾಖಲೆಯನ್ನೂ ಬರೆದಿದ್ದಾರೆ.
ಭಾರತಕ್ಕೆ ಚೆಸ್ ಕ್ರಾಂತಿ ತಂದ ಆನಂದ್ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಈ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಎನಿಸಿಕೊಂಡಿರುವ ಗುಕೇಶ್ ಕೂಡ ವಿಶ್ವನಾಥನ್ ಆನಂದ್ ಅವರ ಅಕಾಡೆಮಿಯಿಂದ ಬಂದಿದ್ದು, ವಿಶೇಷ.
ಈ ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಗುಕೇಶ್, ಕಳೆದ ಏಪ್ರಿಲ್ ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ ಶಿಪ್ ನ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮೂರನೇ ಕಿರಿಯ ಆಟಗಾರನೆನಿಸಿಕೊಂಡಿದ್ದರು. 9 ಅಂಕ ಗಳಿಸಿ ಪಂದ್ಯಾವಳಿಯನ್ನು ಗೆದ್ದುಕೊಂಡಿದಲ್ಲದೆ, ಕೇವಲ 17 ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡಿದ್ದರು.
ಸೆಪ್ಟೆಂಬರ್‌ನಲ್ಲಿ, ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿ ನಡೆದ ಚೆಸ್ ಒಲಿಂಪಿಯಾಡ್ನಲ್ಲಿ ಭಾರತೀಯ ತಂಡದ ಭಾಗವಾಗಿದ್ದ ಗುಕೇಶ್ ಮೊದಲ ಬಾರಿಗೆ ಒಲಿಂಪಿಯಾಡ್ ನ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ವಿಶ್ವ ಚೆಸ್ ಚಾಂಪಿಯನ್ಶಿಪ್ ಫೈನಲ್ಗೆ ಎಂಟ್ರಿಕೊಟ್ಟಿದ್ದ ಗುಕೇಶ್ ಹದಿನೈದು ದಿನಗಳ ಕಾಲ ನಡೆದ ಈ ಪಂದ್ಯಾವಳಿಯಲ್ಲಿ 7.5- 6.5 ಅಂಕಗಳ ಅಂತರದಿಂದ ಚೀನಾದ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಮಣಿಸಿದ್ದಾರೆ.