ಬೆಳಗಾವಿ: ಮೀಸಲಾತಿಗೆ ಆಗ್ರಹಿಸಿ ನಾವು ಶಾಂತ ರೀತಿಯಿಂದ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿಸಿದ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ವಿಕೋಪಕ್ಕೆ ತೆರಳುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿ, ಹಲವರನ್ನು ವಶಕ್ಕೆ ಪಡೆದಿದ್ದರು. ಆನಂತರ ಬಿಡುಗಡೆ ಮಾಡಲಾಯಿತು. ಈ ವೇಳೆ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ನಮ್ಮದು ಶ್ರಮಿಕ ವರ್ಗ. ನಮ್ಮ ಸಮಾಜದ ಜನರ ಮೇಲೆ ಹಲ್ಲೆ ಮಾಡಿದ ಕುಖ್ಯಾತಿಗೆ ಸಿದ್ದರಾಮಯ್ಯ ಸರ್ಕಾರ ಪಾತ್ರವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಶಾಂತಿಯುತ ಹೋರಾಟಕ್ಕೂ ಆಸ್ಪದ ನೀಡದ ಎಡಿಜಿಪಿ ನಮ್ಮ ಜನರ ಮೇಲೆ ದೌರ್ಜನ್ಯ ನಡೆಸಲು ಕಾರಣರಾಗಿದ್ದಾರೆ. ಅಮಾಯಕರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಕೂಡಲೇ ಸರ್ಕಾರ ಎಡಿಜಿಪಿ ಹಿತೇಂದ್ರ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ನಮ್ಮ ಹಕ್ಕನ್ನು ನೀಡುವುದಿಲ್ಲ ಎಂದಾದರೆ ನಾವು ಮುಂದಿನ ದಿನಗಳಲ್ಲಿ ನಮಗೆ ಬೇಕಾದ ಸರ್ಕಾರ ಅಧಿಕಾರಕ್ಕೆ ತಂದು ಮೀಸಲಾತಿ ಪಡೆಯುವ ಶಕ್ತಿ ಸಾಮರ್ಥ್ಯ ಹೊಂದಿದ್ದೇವೆ. 2028ಕ್ಕೆ ಈ ಸರ್ಕಾರವನ್ನು ನೋಡಿಕೊಳ್ಳುತ್ತೇವೆ. ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಗುಡುಗಿದ್ದಾರೆ.