ನವದೆಹಲಿ: ರೈತ ಸಂಘಟನೆಗಳ ಮುಖಂಡರು ಹಾಗೂ ಕೃಷಿ ಆರ್ಥಿಕ ತಜ್ಞರು ಬೇಡಿಕೆ ಈಡೇರಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಅರ್ಪಿಸಿದ್ದಾರೆ.
ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಕೃಷಿ ಉತ್ಪನ್ನಗಳಿಗೆ ಕಡಿಮೆ ತೆರಿಗೆ, ಕೀಟನಾಶಕಗಳ ಮೇಲಿನ ಜಿಎಸ್ ಟಿ ಕಡಿತ, ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಹಣ ದ್ವಿಗುಣ ಮಾಡಬೇಕು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಮನವಿ ಮಾಡಲಾಗಿದೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2025-26ನೇ ಸಾಲಿನ ಬಜೆಟ್ ರೂಪಿಸಲು ಸಿದ್ಧತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ತಜ್ಞರು ಹಾಗೂ ರೈತ ಸಂಘಟನೆಗಳ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು. ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಹಣಕಾಸು ನೆರವು ನೀಡಬೇಕು. ಮಾರುಕಟ್ಟೆ ಸುಧಾರಣೆ ಹಾಗೂ ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ ರೂಪಿಸಬೇಕು. ರೈತ ಪರವಾದ ನೀತಿಗಳನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಲಾಯಿತು.
ಕಡಲೆ, ಸೋಯಾಬೀನ್, ಸಾಸಿವೆ ಉತ್ಪಾದನೆ ಹೆಚ್ಚಿಸಲು ಮುಂದಿನ ಎಂಟು ವರ್ಷ ವಾರ್ಷಿಕ 1 ಸಾವಿರ ಕೋಟಿ ರೂ. ಅನುದಾನ ಒದಗಿಸಬೇಕು. ಶೇ. 1ರ ಬಡ್ಡಿದರದಲ್ಲಿ ಕೃಷಿ ಸಾಲ ವಿತರಿಸಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೃಷಿ ಬೆಳೆಗಳಿಗೆ ನೀಡಲಾಗುತ್ತಿರುವ ವಿಮಾ ಸೌಲಭ್ಯ ಸಣ್ಣ ರೈತರಿಗೆ ಸಿಗುವಂತೆ ಮಾಡಲು ಶೂನ್ಯ ದರದಲ್ಲಿಬೆಳೆ ವಿಮಾ ಸೌಲಭ್ಯ ಒದಗಸಬೇಕು. ಕೃಷಿ ಉಪಕರಣಗಳು, ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಔಷಧಗಳ ಮೇಲಿನ ಜಿಎಸ್‌ಟಿ ರದ್ದುಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಒತ್ತಾಯಿಸಿದರು.