ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೂರ್ನಿಯ 2ನೇ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಾಣುವುದರ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಅಂಕಪಟ್ಟಿಯಲ್ಲಿ ಕುಸಿತ ಕಂಡಿದೆ.
2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 10 ವಿಕೆಟ್ ಗಳ ಭರ್ಜರಿ ಚಯ ಸಾಧಿಸಿದೆ. ಇದರ ಬೆನ್ನಲ್ಲೇ ಭಾರತ ತಂಡವು 2 ಸ್ಥಾನ ಕುಸಿತ ಕಂಡಿದೆ. ಈ ಪಂದ್ಯಕ್ಕೂ ಮೊದಲು ಅಗ್ರ ಸ್ಥಾನದಲ್ಲಿದ್ದ ಭಾರತ ತಂಡ ಈಗ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ ತಂಡವು ಒಟ್ಟು 60.71% ಪಾಯಿಂಟ್ಸ್ನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 59.26% ಅಂಕ ಗಳಿಸಿರುವ ದಕ್ಷಿಣ ಆಫ್ರಿಕಾ ತಂಡ ದ್ವಿತೀಯ ಸ್ಥಾನಕ್ಕೆ ಏರಿಕೆಯಾಗಿದೆ.
ಭಾರತ ತಂಡವು 57.29% ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಆದರೂ ಭಾರತ ತಂಡ ಫೈನಲ್ ತಲುಪುವ ರೇಸ್ ನಿಂದ ಹೊರ ಬಿದ್ದಿಲ್ಲ. ಆಸ್ಟ್ರೇಲಿಯಾ ವಿರುದ್ಧ ಇನ್ನೂ ಮೂರು ಪಂದ್ಯಗಳಿದ್ದು, ಈ ಪಂದ್ಯಗಳಲ್ಲಿ ಭಾರತ ಜಯಗಳಿಸಿದರೆ, ಸರಣಿಯನ್ನು 4-1 ಅಂತರದಿಂದ ಗೆದ್ದುಕೊಳ್ಳುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ಏರಬಹುದು. ಹೀಗಾಗಿ ಭಾರತದ ಪಾಲಿಗೆ ಮುಂದಿನ ಪಂದ್ಯಗಳು ನಿರ್ಣಾಯಕವಾಗಿವೆ. ಈ ಹಿನ್ನೆಲೆಯಲ್ಲಿ ಭಾರತ ತಂಡವು ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಿದೆ.