ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ಭರ್ಜರಿ ಗೆಲುವು ದಾಖಲಿಸಿದ್ದು, ಬರೋಬ್ಬರಿ 16 ವರ್ಷಗಳ ನಂತರ ಗೆದ್ದ ಸಾಧನೆ ಮಾಡಿದೆ.
ನ್ಯೂಜಿಲೆಂಡ್ ವಿರುದ್ಧ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಬರೋಬ್ಬರಿ 323 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-0 ಅಂತರದಿಂದ ವಶಕ್ಕೆ ಪಡೆದಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಹ್ಯಾರಿ ಬ್ರೂಕ್ (123) ಅವರ ಶತಕದ ನೆರವಿನಿಂದ ಪ್ರಥಮ ಇನಿಂಗ್ಸ್ನಲ್ಲಿ 280 ರನ್ ಗಳಿಸಿತ್ತು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡವು ಕೇವಲ 125 ರನ್ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್ ನಲ್ಲಿ 155 ರನ್ ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡವು ಬರೋಬ್ಬರಿ 427 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಈ ವೇಳೆ ಜೋ ರೂಟ್ ಶತಕ ಸಿಡಿಸಿದ್ದರು.
ಹೀಗಾಗಿ ನ್ಯೂಜಿಲೆಂಡ್ ತಂಡವು ಗೆಲ್ಲವು 583 ರನ್ ಗಳ ಕಠಿಣ ಗುರಿ ಪಡೆಯಿತು. ಕೇವಲ 59 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕಿವೀಸ್ ಪಡೆಗೆ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಬ್ಲಂಡೆಲ್ ಆಸರೆಯಾಗಿ ನಿಂತರು. ಬ್ಲಂಡೆಲ್ 102 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ 115 ರನ್ ಗಳಿಸಿದರು. ಆದರೂ ನ್ಯೂಜಿಲೆಂಡ್ ತಂಡದ ಇನ್ನಿತರ ಆಟಗಾರರು ಉತ್ತಮ ಪ್ರದರ್ಶನ ತೋರದ ಹಿನ್ನೆಲೆಯಲ್ಲಿ 259 ರನ್ ಗಳಿಗೆ ಆಲ್ ಔಟ್ ಆಯಿತು. ಈ ಮೂಲಕ ಇಂಗ್ಲೆಂಡ್ ತಂಡ 323 ರನ್ ಗಳ ಭರ್ಜರಿ ಜಯ ಸಾಧಿಸಿತು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು. 16 ವರ್ಷಗಳ ಬಳಿಕ ಕಿವೀಸ್ ನೆಲದಲ್ಲಿ ಸರಣಿ ಗೆಲ್ಲುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿದೆ.