ಮುಂಬಯಿ: ಮಹಾರಾಷ್ಟ್ರ ಮಹಾಯುತಿ ಮಿತ್ರಕೂಟ ಭರ್ಜರಿ ಜಯ ಗಳಿಸಿದ್ದು, ನೂತನ ಸಚಿವ ಸಂಪುಟದ ಪ್ರಮಾಣ ವಚನ ಕಾರ್ಯಕ್ರಮ ಡಿ. 5ರಂದು ನಡೆಯಲಿದೆ.
ಆದರೆ, ಇಲ್ಲಿಯವರೆಗೆ ಯಾರು ಸಿಎಂ ಎಬುವುದು ಖಚಿತವಾಗಿಲ್ಲ. ಡಿ. 5ರಂದು ಮುಂಬೈನ ಆಜಾದ್ ಮೈದಾನದಲ್ಲಿ ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮಹಾರಾಷ್ಟ್ರ ಬಿಜೆಪಿ ಹೇಳಿದೆ.
ಸಿಎಂ ಗಾದಿಗಾಗಿ ಮಹಾಯುತಿಯ ಬಿಜೆಪಿ, ಎನ್ ಸಿಪಿ ಮತ್ತು ಶಿವಸೇನೆ ಮಧ್ಯೆ ಜಗಳ ನಡೆಯುತ್ತಿರುವ ಸಂದರ್ಭದಲ್ಲೇ ಪ್ರಮಾಣ ವಚನ ಸ್ವೀಕಾರ ಸಮಾರಂಭ ಘೋಷಿಸಿರುವುದು ಕುತೂಹಲ ಮೂಡಿಸಿದೆ. ಆದರೆ ಸದ್ಯದ ಮಾಹಿತಿಯಂತೆ ಅತೀ ಹೆಚ್ಚು ಸ್ಥಾನ ಗಳಿಸಿರುವ ಬಿಜೆಪಿಗೆ ಸಿಎಂ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿಯ ಶಾಸಕರು, ಸಂಸದರು, ವಿವಿಧ ಸೆಲ್ ಅಧ್ಯಕ್ಷರು ಮತ್ತು ಮಂಡಲ ಅಧ್ಯಕ್ಷರು ಭಾಗವಹಿಸಲಿದ್ದಾರೆ. 6,000-7,000 ಪಕ್ಷದ ಕಾರ್ಯಕರ್ತರು ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆಯ ಪದಾಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಜಿತ್ ಪವಾರ್ ಅವರ ಎನ್‌ಸಿಪಿಯ 4,000 ಕಾರ್ಯಕರ್ತರು ಅಲ್ಲಿಗೆ ಆಗಮಿಸುವ ನಿರೀಕ್ಷೆಯಿದೆ. ಆಜಾದ್ ಮೈದಾನದ ಸಾಮರ್ಥ್ಯ 50 ಸಾವಿರ ಜನರು. ಸುಮಾರು 25,000 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.