ವರನಟಿ ಡಾ. ಎಂ. ಲೀಲಾವತಿ ದೇಗುಲ ಉದ್ಘಾಟನಾ ಸಮಾರಂಭವು ಡಿ. 5ರಂದು ಬೆಳಗ್ಗೆ 10ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ಡಾ. ಎಂ. ಲೀಲಾವತಿ ಎಸ್ಟೇಟ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಆದಿ ಚುಂಚನಗಿರಿ ಮಠದ ಅಧ್ಯಕ್ಷ ಡಾ. ನಿರ್ಮಲಾನಂದನಾಥ್ ಮಹಾ ಸ್ವಾಮೀಜಿ, ನೆಲಮಂಗಲದ ಪವಾಡ ಬಸವಣ್ಣ ದೇವರ ಮಠದ ಸಿದ್ದಲಿಂಗ ಮಹಾ ಸ್ವಾಮೀಜಿ ವಹಿಸಿಕೊಳ್ಳಲಿದ್ದಾರೆ.
ದೇಗುಲ ಹಾಗೂ ದಾಸೋಹ ನಿಲಯವನ್ನು ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಎಚ್. ಮುನಿಯಪ್ಪ ಹಾಗೂ ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ.
ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಶ್ರೀನಿವಾಸ್ ಹಾಗೂ ಪಾಂಡವಪುರ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಜೆ.ಎನ್. ರಾಮಕೃಷ್ಣಗೌಡ ಅವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಅಲ್ಲದೇ, ಇದೇ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಅಭಿಮಾನಿಗಳು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ನಟ ವಿನೋದ್ ರಾಜ್ ಪ್ರಕಟಣೆಯಲ್ಲಿ ಕೋರಿದ್ದಾರೆ.