ಮೈಸೂರು: ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಮತ್ತೆ ಸಂಕಷ್ಟ ಶುರುವಾಗಿದೆ.
ಈಗ ಮುಡಾ ಹಗರಣ ಮತ್ತೊಂದು ತಿರುವು ಪಡೆದಿದೆ. ಜಮೀನು ಮಾಲೀಕ ದೇವರಾಜು ವಿರುದ್ಧ ಅಣ್ಣನ ಮಗಳು ಜಮುನಾ ಮೈಸೂರಿನ (Mysore) ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರ ಹೆಸರಿನಲ್ಲಿರುವ ಜಮೀನು ದೇವರಾಜು ಅವರದ್ದು ಅಲ್ಲ, ಬದಲಿಗೆ ನಮ್ಮ ತಂದೆ ಮೈಲಾರಯ್ಯ ಅವರಿಗೆ ಸೇರಿದ್ದು ಎಂದು ದಾವೆ ಹಾಕಿದ್ದಾರೆ.
ಅಲ್ಲದೇ, ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸೇರಿದಂತೆ 12 ಜನರ ಮೇಲೆ ಸಿವಿಲ್ ಕೇಸ್ ದಾಖಲಿಸಿದ್ದಾರೆ. ಚಿಕ್ಕಪ್ಪ ದೇವರಾಜು ಮೋಸದಿಂದ ಜಮೀನು ಮಾರಾಟ ಮಾಡಿದ್ದಾರೆ. ಜಮೀನು ಮೊದಲು ನನ್ನ ತಂದೆ ಮೈಲಾರಯ್ಯ ಅವರ ಹೆಸರಿನಲ್ಲಿ ಇತ್ತು. ನಮ್ಮ ಹೆಸರಿಗೆ ಮಾಡಿಸಿಕೊಡುತ್ತೇನೆಂದು ಸಹಿ ಮಾಡಿಕೊಂಡು ಮೋಸ ಮಾಡಿದ್ದಾರೆಂದು ದಾವೆ ಹೂಡಿದ್ದಾರೆ. ಹೀಗಾಗಿ ಮುಡಾ ಪ್ರಕರಣ ಈಗ ಮತ್ತೊಂದು ಆಯಾಮಕ್ಕೆ ತಿರುಗಿದೆ.