ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಭಾರತ ತಂಡ ಅದ್ಭುತ ದಾಖಲೆ ಬರೆದಿದೆ. ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದೆ. ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ಭಾರತ ತಂಡದ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಹೊಸ ಇತಿಹಾಸ ಬರೆದಿದ್ದಾರೆ.
ದ್ವಿತೀಯ ಇನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್ಗೆ 201 ರನ್ ಗಳ ಜೊತೆಯಾಟ ನೀಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್ನಲ್ಲಿ ದ್ವಿಶತಕದ ಜೊತೆಯಾಟವಾಡಿದ ಭಾರತದ ಮೊದಲ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆರಂಭಿಕ ಜೋಡಿಯ ದಾಖಲೆ ಸುನಿಲ್ ಗವಾಸ್ಕರ್ ಹಾಗೂ ಕ್ರಿಸ್ ಶ್ರೀಕಾಂತ್ ಹೆಸರಿನಲ್ಲಿತ್ತು. 1986 ರಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಈ ಜೋಡಿಯು ಮೊದಲ ವಿಕೆಟ್ಗೆ 191 ರನ್ ಗಳಿಸಿದ್ದರು. 38 ವರ್ಷಗಳ ನಂತರ ಈ ದಾಖಲೆಯನ್ನು ಮುರಿಯುವಲ್ಲಿ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಯಶಸ್ವಿಯಾಗಿದ್ದಾರೆ.
ಈ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಭಾರತ ತಂಡ 150 ರನ್ ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ 104 ರನ್ ಗಳಿಸಿತ್ತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ ಕೆಎಲ್ ರಾಹುಲ್ (77) ವಿಕೆಟ್ ಕಳೆದುಕೊಂಡು 244 ರನ್ ಗಳಿಸಿ ಆಡುತ್ತಿದೆ.