ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ಉತ್ತಮ ಪ್ರದರ್ಶನ ತೋರುತ್ತಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 172 ರನ್ ಗಳಿಸಿದೆ. ಕೆಎಲ್ ರಾಹುಲ್ 62 ರನ್ ಹಾಗೂ ಯಶಸ್ವಿ ಜೈಸ್ವಾಲ್ 90 ರನ್ ಗಳಿಸಿ ಆಟವಾಡುತ್ತಿದ್ದಾರೆ. ಈ ಮೂಲಕ ಭಾರತ ತಂಡ 218 ರನ್ ಗಳ ಮುನ್ನಡೆ ಸಾಧಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಜೈಸ್ವಾಲ್, ಎರಡನೇ ಇನ್ನಿಂಗ್ಸ್ನಲ್ಲಿ ಅಜೇಯ 90 ರನ್ ಬಾರಿಸಿದ್ದಾರೆ. ಜೈಸ್ವಾಲ್ ಅವರ ಈ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸೇರಿವೆ. ಎರಡನೇ ಇನ್ನಿಂಗ್ಸ್ನಲ್ಲಿ ಜೈಸ್ವಾಲ್ ಸಿಡಿಸಿದ ಈ ಎರಡೂ ಸಿಕ್ಸರ್ ಗಳು ದಾಖಲೆ ಬರೆಯುವಂತೆ ಮಾಡಿವೆ.
ಈ ಸಿಕ್ಸರ್ ಗಳ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ಮಾಡಿದ್ದಾರೆ. 2024 ರಲ್ಲಿ ಜೈಸ್ವಾಲ್ ಇಲ್ಲಿಯವರೆಗೆ ಒಟ್ಟು 34 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ನ ಮಾಜಿ ಆರಂಭಿಕ ಬ್ರೆಂಡನ್ ಮೆಕಲಮ್ ಅವರ 33 ಸಿಕ್ಸರ್ ಗಳ ದಾಖಲೆ ಮುರಿದಿದ್ದಾರೆ.
ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಾರಿರುವ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕಲಮ್ 2014 ರಲ್ಲಿ ಕ್ಯಾಲೆಂಡರ್ ವರ್ಷದಲ್ಲಿ 33 ಸಿಕ್ಸರ್ ಸಿಡಿಸಿದ್ದರು. ಇಂಗ್ಲೆಂಡ್ ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ 2022 ರಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 26 ಸಿಕ್ಸರ್ ಸಿಡಿಸಿದ್ದರು. ಆಡಮ್ ಗಿಲ್‌ಕ್ರಿಸ್ಟ್ 2005 ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 22 ಸಿಕ್ಸರ್ ಸಿಡಿಸಿದ್ದರು, ವೀರೇಂದ್ರ ಸೆಹ್ವಾಗ್, 2008 ರಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 22 ಸಿಕ್ಸರ್ ಸಿಡಿಸಿದ್ದರು.