ಕೊಲೆ ಪ್ರಕರಣದ ಆರೋಪಿ ದರ್ಶನ್ ಐದು ತಿಂಗಳ ಕಾಲ ಜೈಲಿನಲ್ಲಿದ್ದರು. ಆದರೆ, ತೀವ್ರ ಬೆನ್ನು ನೋವಿನಿಂದಾಗಿ ಶಸ್ತ್ರಚಿಕಿತ್ಸೆಗೆಂದು ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದರು. ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು ಆರು ವಾರಗಳ ಮಧ್ಯಂತರ ಜಾಮೀನನ್ನು ತೆಗೆದುಕೊಳ್ಳಲಾಗಿತ್ತು. ಈಗಾಗಲೇ ಮೂರು ವಾರ ಕಳೆದಿದ್ದು, ಆದರೂ ದರ್ಶನ್ ಗೆ ಶಸ್ತ್ರ ಚಿಕಿತ್ಸೆ ಆಗಿಲ್ಲ.
ಹೈಕೋರ್ಟ್ ನಲ್ಲಿ ನಡೆದ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಎಸ್ ಪಿಪಿ ಪ್ರಸನ್ನ ಕುಮಾರ್, ನ್ಯಾಯಾಲಯದ ನಿರ್ದೇಶನದಂತೆ ದರ್ಶನ್ ರ ಚಿಕಿತ್ಸೆಯ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ ಎಂದಿದ್ದಾರೆ. ಆಗ ಸಿ.ವಿ. ನಾಗೇಶ್ ಅವರು ದರ್ಶನ್ ಗೆ ಶಸ್ತ್ರಚಿಕಿತ್ಸೆ ಯಾಕೆ ಆಗಿಲ್ಲ ಎಂಬ ಕಾರಣವನ್ನು ಹೈಕೋರ್ಟ್ ಗೆ ಸಲ್ಲಿಸಿದ್ದಾರೆ.
ದರ್ಶನ್ ಗೆ ಶಸ್ತ್ರ ಚಿಕಿತ್ಸೆ ಮಾಡೋದಕ್ಕೆ ತಯಾರಿ ಮಾಡಲಾಗ್ತಾ ಇದೆ. ಶಸ್ತ್ರಚಿಕಿತ್ಸೆಗಾಗಿ ದರ್ಶನ್ ಅನ್ನು ಅಣಿಮಾಡಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ದರ್ಶನ್ಗೆ ಅತಿಯಾದ ರಕ್ತದೊತ್ತಡ ಸಮಸ್ಯೆ ಎದುರಾಗಿದೆ. ದರ್ಶನ್ ಶಸ್ತ್ರ ಚಿಕಿತ್ಸೆಗೆ ಮಾನಸಿಕವಾಗಿ ಸಿದ್ದರಾಗಬೇಕಿದೆ. ಕನ್ಸರ್ವೇಟಿವ್ ಟ್ರೀಟ್ಮೆಂಟ್ ಮುಂದುವರೆದಿದೆ, ಪಿಸಿಯೋಥೆರಪಿ ಮತ್ತು ಔಷಧಗಳಿಂದ ಸಮಸ್ಯೆ ನಿಯಂತ್ರಣದಲ್ಲಿಡುವ ಪ್ರಯತ್ನ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.
ದರ್ಶನ್ ಜೈಲಿನಲ್ಲಿದ್ದಾಗ ಬೆನ್ನು ನೋವಿನ ಸಮಸ್ಯೆ ಎದುರಿಸಿದ್ದರು. ದರ್ಶನ್ರ ಬೆನ್ನು ಮೂಳೆಯ ಎಲ್1 ಹಾಗೂ ಎಲ್5 ಭಾಗದಲ್ಲಿ ಸಮಸ್ಯೆ ಎದುರಾಗಿತ್ತು.