ದೇಶದಲ್ಲೇ ಶ್ರೀಮಂತ ದೇವರು ಹಾಗೂ ಹೆಚ್ಚು ಭಕ್ತರನ್ನು ಹೊಂದಿರುವ ದೇವರು ತಿರುಪತಿ ತಿಮ್ಮಪ್ಪ. ರಾಜ್ಯ, ದೇಶ-ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ. ಆದರೆ, ಲಡ್ಡು ಪ್ರಸಾದದ ಸದ್ದಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆದರೂ ಭಕ್ತರ ಸಂಖ್ಯೆ ಹೆಚ್ಚಾಗಿ ಇದೆ ಹೊರತು, ಕಡಿಮೆಯಾಗಿಲ್ಲ. ಈ ಮಧ್ಯೆ ದೇವಸ್ಥಾನ ಮಂಡಳಿ ಹಲವು ನಿಯಮ ಜಾರಿಗೊಳಿಸಿದೆ.
ಸಾಮಾನ್ಯ ಭಕ್ತರು ಕೇವಲ 2ರಿಂದ 3 ಗಂಟೆಯೊಳಗೆ ದೇವರ ದರ್ಶನ ಪಡೆಯುವಂತೆ ಬದಲಾವಣೆ ತರಲು ಎಐ ಮತ್ತು ಆಧುನಿಕ ತಂತ್ರಜ್ಞಾನ ಬಳಸಲು ಕ್ರಮಕೈಗೊಳ್ಳಲಾಗಿದೆ. ಕಂಪಾರ್ಟ್ ಮೆಂಟ್ ಗಳಲ್ಲಿ ಭಕ್ತರಿಗೆ ತೊಂದರೆ, ಕಿರಿಕಿರಿ ಉಂಟಾಗದಂತೆ ದರ್ಶನ ಲಭ್ಯವಾಗಲು ಯೋಜನೆ ರೂಪಿಸಲಾಗಿದೆ. ಅನ್ಯಧರ್ಮೀಯ ನೌಕರರನ್ನು ವಿಆರ್ಎಸ್ ಅಥವಾ ಸರ್ಕಾರಿ ಇಲಾಖೆಗಳಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರತಿ ತಿಂಗಳ ಮೊದಲ ಮಂಗಳವಾರದಂದು ಸ್ಥಳೀಯರಿಗೆ ದೇವರ ದರ್ಶನ ನೀಡಲು ಟಿಟಿಡಿ ನಿರ್ಧರಿಸಿದೆ. ಶ್ರೀವಾಣಿ ಟ್ರಸ್ಟ್ ರದ್ದುಪಡಿಸಿ, ಟಿಕೆಟ್ ಮಾರಾಟದಿಂದ ಬಂದ ಹಣವನ್ನು ಟಿಟಿಡಿ ಖಾತೆಗೆ ಜಮಾ ಮಾಡಲು ಯೋಜಿಸಲಾಗಿದೆ. ಖಾಸಗಿ ಬ್ಯಾಂಕ್ ಠೇವಣಿಗಳಿಂದ ಸ್ವಾಮಿಗೆ ಸೇರಿದ ಹಣವನ್ನು ಸರ್ಕಾರಿ ಬ್ಯಾಂಕ್‌ಗಳಿಗೆ ಜಮಾ ಮಾಡಲು ನಿರ್ಧರಿಸಲಾಗಿದೆ.
ತಿರುಪತಿ ಲಡ್ಡು ಪ್ರಸಾದದಲ್ಲಿ ತುಪ್ಪದ ಗುಣಮಟ್ಟವನ್ನು ಮತ್ತಷ್ಟು ಪರಿಶೀಲನೆ ನಡೆಸಲಿದ್ದು, ಭಕ್ತರಿಗೆ ಅನ್ನದಾನದಲ್ಲಿ ಮತ್ತೊಂದು ಹೊಸ ಬಗೆಯ ಖಾದ್ಯವನ್ನು ನೀಡಲು ಮಂಡಳಿ ನಿರ್ಧರಿಸಿದೆ. ನೌಕರರಿಗೆ ಬ್ರಹ್ಮೋತ್ಸವ ಉಡುಗೊರೆಯನ್ನು 14 ಸಾವಿರದಿಂದ 15,400 ರೂ.ಗೆ ಹೆಚ್ಚಿಸಿ ಎಂದು ಟಿಟಿಡಿ ಆದೇಶ ಹೊರಡಿಸಿದೆ.