ಗುರುಮಠಕಲ್: ಕೂಲಿ ಕೆಲಸಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಜೀಪ್ ಪಲ್ಟಿಯಾದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗುಂಜನೂರು ಕ್ರಾಸ್ ಹತ್ತಿರ ಈ ಘಟನೆ ನಡೆದಿದೆ. ನೆರೆಯ ಸೇಡಂ ತಾಲ್ಲೂಕಿನ ಇಟ್ಕಲ್ ಗ್ರಾಮದ ಬುಜ್ಜಮ್ಮ (24) ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಕೂಲಿ ಕೆಲಸಕ್ಕೆ ಹೊರಟಿದ್ದ ಬುಜ್ಜಮ್ಮ ಎಂ.ಎ ಪದವೀಧರೆ ಎನ್ನಲಾಗಿದೆ.
ಎಂ.ಎ ಪದವಿ ಆಗಿದ್ದರೂ ಬುಜ್ಜಮ್ಮ ಕುಟುಂಬ ನಿರ್ವಹಣೆಗಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಬಡತನದಿಂದಾಗಿ ಅವರು ಅನಿವಾರ್ಯವಾಗಿ ಕೂಲಿಗೆ ಹೋಗುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.