ಚನ್ನಪಟ್ಟಣ: ರಾಜ್ಯದಲ್ಲಿನ ಮೂರು ಕ್ಷೇತ್ರಗಳಿಗೆ ಇತ್ತೀಚೆಗಷ್ಟೇ ಮತದಾನ ನಡೆದಿದೆ. ಫಲಿತಾಂಶಕ್ಕಾಗಿ ಕ್ಷಣಗಣನೆ ಆರಂಭವಾಗಿದ್ದು, ಈ ಮಧ್ಯೆ ಚನ್ನಪಟ್ಟಣದ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಮತದಾನ ಮುಗಿದ ಫಲಿತಾಂಶಕ್ಕೂ ಮುನ್ನ ಬೆಟ್ಟಿಂಗ್ (Betting) ಭರಾಟೆ ಜೋರಾಗಿ ಎನ್ನಲಾಗುತ್ತಿದೆ. ಹೀಗಾಗಿ ಯಾರೂ ಬೆಟ್ಟಿಂಗ್ ಆಡದಂತೆ ನಿಖಿಲ್ ಕಿವಿ ಮಾತು ಹೇಳಿದ್ದಾರೆ.
ಚುನಾವಣೆ ಮುಗಿದ ನಂತರ ನಾನು ನಾಯಕರಿಗೆ ಮನವಿ ಮಾಡಿ ವಿಶ್ರಾಂತಿ ಪಡೆಯಲು ಹೇಳಿದ್ದೇನೆ. ಏಕೆಂದರೆ ಅವರು ಬರೋಬ್ಬರಿ 28 ದಿನಗಳ ಕಾಲ ವಿಶ್ರಾಂತಿ ಇಲ್ಲದೆ ಓಡಾಡಿದ್ದಾರೆ. ಹೀಗಾಗಿ ಫಲಿತಾಂಶದ ದಿನ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಮಲಗಿಕೊಳ್ಳಿ. ದಯಮಾಡಿ ಬೆಟ್ಟಿಂಗ್ ಗೆ ಮಾತ್ರ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.
ಬೆಟ್ಟಿಂಗ್ ದಂಧೆ ನಿಜಕ್ಕೂ ಯಾರ ಜೀವನವನ್ನೂ ರೂಪಿಸುವುದಿಲ್ಲ. ಇದರಿಂದಾಗಿ ಬದುಕು ಹಾಳಾಗುತ್ತದೆ. ಪ್ರಾಮಾಣಿಕವಾಗಿ ಗಳಿಸಿರುವ ದುಡ್ಡನ್ನ ಕಳೆದುಕೊಳ್ಳಬೇಡಿ. ಕೈ ಜೋಡಿಸಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕುಮಾರಣ್ಣ ಲಾಟರಿ ನಿಷೇಧ ಮಾಡಿದ್ದರು. ಆದರೆ, ಈಗ ಆನ್ ಲೈನ್ ಗೇಮ್ ಗೆ ಹಲವರು ಬಲಿಯಾಗುತ್ತಿದ್ದಾರೆ. ಆನ್‌ಲೈನ್ ಗೇಮ್ ಗೆ ಬಲಿಯಾಗಿ ತಂಬಾ ಜನ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಹೀಗಾಗಿ ಯಾರೂ ಚುನಾವಣೆಯ ಸಂದರ್ಭದಲ್ಲಿ ಬೆಟ್ಟಿಂಗ್ ಆಡಬೇಡಿ ಎಂದು ಮನವಿ ಮಾಡಿದ್ದಾರೆ.
ನನಗೆ ಗೆಲ್ಲುವ ವಿಶ್ವಾಸವಿದೆ. ಕ್ಷೇತ್ರದ ಜನತೆಯೂ ಯುವಕನಿಗೆ ಒಂದು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಿದ್ದೆ. ಕ್ಷೇತ್ರದ ಜನತೆಯೂ ಸ್ಪಂದಿಸಿದ್ದಾರೆ ಎಂಬ ಆತ್ಮವಿಶ್ವಾಸವಿದೆ ಎಂದು ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.