ಬೆಂಗಳೂರು: ಎಷ್ಟೇ ಕಠಿಣ ಕಾನೂನು ಜಾರಿಯಾದರೂ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಮಾತ್ರ ಹೆಚ್ಚಾಗುತ್ತಲೇ ಇವೆ. ನಗರದಲ್ಲಿ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಕೇವಲ 5 ಗಂಟೆಗಳಲ್ಲಿ ಬರೋಬ್ಬರಿ 7.62 ಲಕ್ಷ ರೂ. ದಂಡ ಸಂಗ್ರವಾಗಿದೆ.
ಶನಿವಾರ ಬೆಳಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಅಕ್ರಮ ಪಾರ್ಕಿಂಗ್, ನೋ ಎಂಟ್ರಿ ಉಲ್ಲಂಘನೆ, ಫುಟ್‌ಪಾತ್ ರೈಡಿಂಗ್, ಒನ್ ವೇ ಉಲ್ಲಂಘನೆ ಸೇರಿದಂತೆ ವಿವಿಧ ರೀತಿಯ ಉಲ್ಲಂಘನೆಯ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ನಗರದಲ್ಲಿ ಒಟ್ಟು 1,507 ಪ್ರಕರಣಗಳನ್ನು ದಾಖಲಿಸಿ, 7.62 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.
ಈ ಪೈಕಿ 722 ನೋ ಎಂಟ್ರಿ, 590 ಒನ್ ವೇ ಪ್ರಕರಣಗಳಿವೆ. ಈ ಮೂಲಕ ಸಂಚಾರ ನಿಯಮ ಪಾಲಿಸುವಂತೆ ವಾಹನ ಸವಾರರಿಗೆ ಎಚ್ಚರಿಕೆ ನೀಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿಮ ಜಾಗೃತಿ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.
“ಒಂದು ‘ಕ್ಷಿಪ್ರ ಕರೆ’ ನಿಮ್ಮ ಕೊನೆಯ ತಪ್ಪಾಗಲು ಬಿಡಬೇಡಿ. ನಿಮ್ಮ ಜೀವನ ಮತ್ತು ಇತರರದ್ದು ಸಹ—ಅಪಾಯದಲ್ಲಿದೆ ಎಂಬ ಅರಿವಿರಲಿ. ಈಗ ವಾಹನ ಚಲಾಯಿಸಿ, ನಂತರ ಕರೆ ಮಾಡಿ.” ಎಂದು ವಾಹನ ಚಾಲನೆ ವೇಳೆ ಮೊಬೈಲ್ ಬಳಸುವವರನ್ನು ಪೊಲೀಸರು ಸಾಮಾಜಿಕ ಜಾಲತಾಣದ ಮೂಲಕ ಎಚ್ಚರಿಕೆ ನೀಡಿದ್ದಾರೆ.