ನವದೆಹಲಿ: ಚಾಂಪಿಯನ್ಸ್ ಟ್ರೋಫಿ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣ ತೋರುತ್ತಿಲ್ಲ. 2025ರಲ್ಲಿ ನಡೆಯಬೇಕಿರುವ ಚಾಂಪಿಯನ್ಸ್ ಟ್ರೋಫಿ ವಿಚಾರದಲ್ಲಿ ಪಾಕ್ ಭಾರೀ ವಿವಾದವನ್ನೇ ಎಬ್ಬಿಸುತ್ತಿದೆ. ಹೀಗಾಗಿ ಈಗ ಭಾರತಕ್ಕೆ ಆತಿಥ್ಯ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಭದ್ರತೆಯ ಕಾರಣ ನೀಡಿ ಭಾರತ (Team India) ಪಾಕ್ ನೆಲದಲ್ಲಿ ಆಡುವುದಿಲ್ಲ ಎಂದು ಈಗಾಗಲೇ ಭಾರತ ಹೇಳಿಯಾಗಿದೆ. ಈ ಹಿನ್ನೆಲೆಯಲ್ಲಿ ಐಸಿಸಿ ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಸುವುದು ಸಾಧ್ಯವೇ ಎಂದು ಪಿಸಿಬಿಗೆ ಕೇಳಿದೆ. ಆದರೆ, ಪಾಕ್ ಮಾತ್ರ ಮೊಂಡುತನ ಪ್ರದರ್ಶಿಸುತ್ತಿದೆ. ಹೀಗಾಗಿ ಐಸಿಸಿ ಇನ್ನೂ ಟೂರ್ನಿಯ ವೇಳಾಪಟ್ಟಿ ಬಿಡುಗಡೆ ಮಾಡಿಲ್ಲ.
ಉಗ್ರವಾದ (Terrorism) ಹಾಗೂ ಆರ್ಥಿಕ ಸಂಕಷ್ಟದಿಂದ (Financial Crisis) ಬಳಲುತ್ತಿರುವ ಪಾಕಿಸ್ತಾನಕ್ಕೆ 28 ವರ್ಷಗಳ ನಂತರ ಐಸಿಸಿ ಟೂರ್ನಿ (ICC Tourney) ಆಯೋಜಿಸುವ ಅವಕಾಶ ಸಿಕ್ಕಿದೆ. ಇದನ್ನು ಕಳೆದುಕೊಳ್ಳಲು ಪಾಕ್ ಸರ್ಕಾರ ಹಾಗೂ ಅಲ್ಲಿನ ಕ್ರಿಕೆಟ್ ಮಂಡಳಿ ಸಿದ್ದವಿಲ್ಲ. ಹೀಗಾಗಿ ಭಾರತದ ಮನವೊಲಿಸಲು ಶತಪ್ರಯತ್ನ ಮಾಡುತ್ತಿದೆ. ಎಲ್ಲ ಪಂದ್ಯಗಳನ್ನು ಲಾಹೋರ್ನ ಗಡಾಫಿ ಕ್ರೀಢಾಂಗಣದಲ್ಲಿ ಬಿಗಿಭದ್ರತೆಯೊಂದಿಗೆ ನಡೆಸುವುದಾಗಿ ಹೇಳಿದರೂ ಭಾರತ ಮಾತ್ರ ನಕಾರ ಎಂದಿದೆ.
ಭಾರತದಂತೆ ಪಾಕಿಸ್ತಾನ ಕೂಡ ಗಟ್ಟಿ ನಿಲುವನ್ನು ತಾಳಿದೆ. ಹೀಗಾಗಿ ಐಸಿಸಿ ಟೂರ್ನಿ ಆಯೋಜನೆಯ ಸ್ಥಳ ಬದಲಾವಣೆಗೆ ಮುಂದಾಗಿದೆ. ಈಗಾಗಲೇ ದಕ್ಷಿಣ ಆಫ್ರಿಕಾಕ್ಕೆ (South Africa) ಟೂರ್ನಿಯನ್ನು ಸ್ಥಳಾಂತರಿಸಲು ಐಸಿಸಿ (ICC) ಯೋಜನೆ ರೂಪಿಸಿದ್ದು, ಇದೆಲ್ಲದರ ನಡುವೆ ಮಧ್ಯೆ ಈಗ ಟೂರ್ನಿಯನ್ನು (Champions Trophy) ಭಾರತದಲ್ಲಿ ಆಯೋಜಿಸಲು ಐಸಿಸಿ ಚಿಂತಿಸುತ್ತಿದೆ ಎಂದು ವರದಿಯಾಗಿದೆ.
Sports Tak ವರದಿಯಂತೆ, ಪಾಕಿಸ್ತಾವವು ಭಾರತದಂತೆ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದು, ಈ ನಿಟ್ಟಿನಲ್ಲಿ ಐಸಿಸಿ ಟೂರ್ನಿಯನ್ನು (Champions Trophy) ಭಾರತದಲ್ಲಿ ಆಯೋಜಿಸಲು ಮುಂದಾಗಿದೆ ಎನ್ನಲಾಗಿದೆ. ಈ ವಿಚಾರ ಇನ್ನು ಮಾತುಕತೆ ಹಂತದಲ್ಲಿದೆ.
ಭಾರತ ತಂಡ (Team India) ಚಾಂಪಿಯನ್ಸ್ ಟ್ರೋಫಿ (Champions Trophy) ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗಲಿದೆ. ಭಾರತ ತಂಡ ಪಾಕಿಸ್ತಾನಕ್ಕೆ ಬರುವುದರಿಂದ ಉಭಯ ದೇಶಗಳ ನಡುವಿನ ಸಂಬಂಧ ಸ್ವಲ್ಪಮಟ್ಟಿಗೆ ಸರಿಹೋಗಬಹುದು ಎಂದು ಪಿಸಿಬಿ ಆಶಿಸಿದೆ. ಆದರೆ, ಭಾರತ ಮಾತ್ರ ಯಾವುದೇ ಕಾರಣಕ್ಕೂ ಹೋಗುವುದಿಲ್ಲ ಎಂದಿದೆ.