ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಅವರು ಹತಾಶೆಯಲ್ಲಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಆರೋಪಿಸಿರುವ ಅವರು, ಸೋತಾಗ ಇವಿಎಂ ಹಾಗೂ ಚುನಾವಣಾ ಆಯೋಗವನ್ನೇ ಅನುಮಾನಿಸುವುದು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ದೂಷಿಸುವುದು. ಕಾಂಗ್ರೆಸ್ ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಬಗೆ ಇದು. ಆದರೀಗ ಮುಡಾ ಹಗರಣದ ಕಪ್ಪು ಮಸಿ ಬಳಿದುಕೊಂಡು ನ್ಯಾಯಾಂಗ ವ್ಯವಸ್ಥೆಯಿಂದ ಸಿಎಂ ಸಿದ್ದರಾಮಯ್ಯ ಅಪರಾಧಿ ಸ್ಥಾನದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರ ಸುಪುತ್ರ ವಿಧಾನ ಪರಿಷತ್ ಸದಸ್ಯ ಡಾ.ಎಸ್.ಯತೀಂದ್ರ, ಕೆಲ ಕೋರ್ಟ್‌ಗಳು ಕೇಂದ್ರ ಸರ್ಕಾರದ ಮಾತು ಕೇಳುತ್ತಿವೆ ಎಂದು ಹೇಳುವ ಮೂಲಕ ದೇಶದ ಘನ ನ್ಯಾಯಾಂಗ ವ್ಯವಸ್ಥೆಯನ್ನೇ ಅವಮಾನಿಸಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಅವರ ತಂದೆಯ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ, ತನಿಖೆಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಹತಾಶೆಯಿಂದ ಈ ರೀತಿ ನ್ಯಾಯಾಂಗ ವ್ಯವಸ್ಥೆಯನ್ನು ನಿಂದಿಸಿದ್ದಾರೆ. ಸಿಎಂ ಪುತ್ರ ಎಂಬ ಅಹಂನಲ್ಲಿ ಅವರು ಈ ರೀತಿ ಮಾತನಾಡಿದ್ದಾರೆ. ಈ ಮೂಲಕ ತಮ್ಮ ಶಾಸಕತ್ವದ ಘನತೆ, ಸಂವಿಧಾನದ ಘನತೆ ಕಳೆದಿದ್ದಾರೆ ಎಂದು ಗುಡುಗಿದ್ದಾರೆ.