ಭಾರತ ಹಾಗೂ ಪಾಕ್ ಕ್ರಿಕೆಟ್ ಮಂಡಳಿಗಳ ಮಧ್ಯೆ ಈಗ ಚಾಂಪಿಯನ್ಸ್ ಟ್ರೋಫಿಯ ಗುದ್ದಾಟ ಶುರುವಾಗಿದೆ. ಪಾಕಿಸ್ತಾನ್ ಕ್ಕೆ ಯಾವುದೇ ಕಾರಣಕ್ಕೂ ತೆರಳುವುದಿಲ್ಲ ಎಂದು ಈಗಾಗಲೇ ಬಿಸಿಸಿಐ, ಐಸಿಸಿಗೆ ತಿಳಿಸಿದೆ. ಈ ಮಧ್ಯೆ ನಾಡು ಟೂರ್ನಿ ನಡೆಸುತ್ತೇವೆ ಎಂದು ಪಿಸಿಬಿ ಹೇಳಿದೆ. ಆದರೆ, ಈಗ ಭಾರತದ ಬೇಡಿಕೆಗೆ ಮಣಿಯದಂತೆ ಪಾಕ್ ಸರ್ಕಾರ ಹೇಳಿದೆ ಎನ್ನಲಾಗಿದೆ.
ಬಿಸಿಸಿಐ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವಂತೆ ಬೇಡಿಕೆ ಇಟ್ಟಿದೆ. ಇದಕ್ಕೆ ಪಿಸಿಬಿ ಒಪ್ಪುತ್ತಿಲ್ಲ. ಭಾರತವು ಟೂರ್ನಿ ಆಡಲು ನಮ್ಮ ದೇಶಕ್ಕೆ ಬರಬೇಕು ಎನ್ನುತ್ತಿದೆ. ಈ ಮಧ್ಯೆ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸುವ ಭಾರತದ ಬೇಡಿಕೆಗೆ ಮಣಿಯಬೇಡಿ ಎಂದು ಪಾಕಿಸ್ತಾನ್ ಸರ್ಕಾರ ತನ್ನ ಕ್ರಿಕೆಟ್ ಮಂಡಳಿಗೆ ಸೂಚಿಸಿದೆ ಎಂದು ವರದಿಯಾಗಿದೆ.
ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಸಮಸ್ಯೆಯು ಮತ್ತಷ್ಟು ಜಟಿಲವಾಗುವ ಸಾಧ್ಯತೆಯಿದೆ. ಬಿಸಿಸಿಐ, ಐಸಿಸಿಗೆ ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜಿಸುವಂತೆ ಕೋರಿದೆ. ಹೀಗಾಗಿ ಐಸಿಸಿ ಕೂಡ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಹೇಳಿದೆ. ಭಾರತದ ಪಂದ್ಯಗಳನ್ನು ದುಬೈ ಅಥವಾ ಶ್ರೀಲಂಕಾದಲ್ಲಿ ಆಯೋಜಿಸುವ ಬಗ್ಗೆ ಚರ್ಚಿಸಲಾಗಿದೆ. ಆದರೆ, ಈಗ ಪಾಕ್ ಮಾತ್ರ ಈ ರೀತಿ ಪಟ್ಟು ಹಿಡಿದಿದೆ.
ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಸಿದ್ಧವಾಗುತ್ತಿಲ್ಲ. ಅಲ್ಲದೆ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಪಾಕಿಸ್ತಾನ್ ಸರ್ಕಾರದ ಮೊರೆ ಹೋಗಿತ್ತು. ಸರ್ಕಾರ, ಯಾವುದೇ ಕಾರಣಕ್ಕೂ ಭಾರತದ ಬೇಡಿಕೆಗೆ ಮಣಿಯದಿರಿ ಎಂದು ಸೂಚಿಸಿದೆ ಎಂದು ವರದಿಯಾಗಿದೆ.
ಟೂರ್ನಿಯ ಪಂದ್ಯಗಳನ್ನು ಪಾಕಿಸ್ತಾನದ ಹೊರಗೆ ಆಯೋಜಿಸುವ ಯಾವುದೇ ಆಲೋಚನೆಯಿಲ್ಲ. ಅಲ್ಲದೆ ಸರ್ಕಾರವೇ ಭಾರತದ ಬೇಡಿಕೆಗೆ ಮಣಿಯಬೇಡಿ ಎಂದು ಹೇಳಿದೆ. ಹೀಗಾಗಿ ಪಾಕಿಸ್ತಾನದಲ್ಲೇ ಇಡೀ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲಿದ್ದೇವೆ ಎಂದು ಪಿಸಿಬಿ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ. ಈ ರೀತಿಯಾದರೆ, ಪಾಕ್ ಗೆ ಆಯೋಜನೆಯ ಹಕ್ಕು ಕೈ ತಪ್ಪಬಹುದು. ಆತಿಥ್ಯದ ಹಕ್ಕು ಕೈ ತಪ್ಪಿದರೆ, ಟೂರ್ನಿಯಿಂದಲೇ ಹೊರಗುಳಿಯಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ ಎನ್ನಲಾಗಿದೆ. ಇದರಿಂದ ಪಾಕ್ ಗೆ ನಷ್ಟವೇ ಹೊರತು, ಭಾರತಕ್ಕೆ ಮಾತ್ರ ಯಾವುದೇ ನಷ್ಟವಾಗುವುದಿಲ್ಲ. ಒಂದು ವೇಳೆ ಭಾರತ ಈ ಟೂರ್ನಿಯಲ್ಲಿ ಭಾಗವಹಿಸದಿದ್ದರೆ, ಐಸಿಸಿಗೆ ಭಾರೀ ನಷ್ಟವಾಗಲಿದೆ. ಅಲ್ಲದೇ, ಪಾಕ್ ಕೂ ನಷ್ಟವಾಗಲಿದೆ.