ರಾಯಚೂರು: ಡಿಸೆಂಬರ್ ಅಂತ್ಯದ ವೇಳೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗುತ್ತಾರೆ ಎಂಬ ಗುಸು ಗುಸು ಪಕ್ಷದ ಪಾಳಯದಲ್ಲಿ ಚರ್ಚೆಯಾಗುತ್ತಿದೆ. ಏಕೆಂದರೆ, ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಮಾತು ಇದಕ್ಕೆ ಪುಷ್ಠಿ ನೀಡುತ್ತಿದೆ.
ನಗರದಲ್ಲಿ ಮಾತನಾಡಿರುವ ಅವರು, ಬಿ.ವೈ. ವಿಜಯೇಂದ್ರನನ್ನು ನಾನು ರಾಜ್ಯಾಧ್ಯಕ್ಷ ಎಂದು ಒಪ್ಪಿಕೊಂಡಿಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರನ್ನು ರಾಜ್ಯಾದ್ಯಕ್ಷರನ್ನಾಗಿ ಹೈಕಮಾಂಡ್ ನೇಮಕ ಮಾಡಿದೆ. ಆದರೆ, ಪ್ರದಾನಿ ಮೋದಿಗೋಸ್ಕರ ಎಲ್ಲವನ್ನು ನುಂಗಿಕೊಂಡು ಕೆಲಸ ಮಾಡಿದ್ದೇವೆ. ಈಗ ನಾವು ಹಲವರು ವಿಜಯೇಂದ್ರ ಕಾರ್ಯವೈಖರಿ ಬಗ್ಗೆ ಹೇಳಿದ್ದೇವೆ. ಡಿಸೆಂಬರ್, ಜನವರಿಯಲ್ಲಿ ಏನಾದರೂ ನಿರ್ಣಯವಾಗುತ್ತದೆ ಎಂದು ನಂಬಿದ್ದೇವೆ ಎಂದಿದ್ದಾರೆ. ಹೀಗಾಗಿ ಡಿಸೆಂಬರ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗುವುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ವಿಜಯೇಂದ್ರ ಇರುವವರೆಗೂ ನಾನು ಪ್ರಚಾರಕ್ಕೆ ಹೋಗಲ್ಲ. ವಿಜಯೇಂದ್ರ ಅಧ್ಯಕ್ಷ ಎಂದು ಒಪ್ಪಿಲ್ಲ, ಒಪ್ಪುವುದಿಲ್ಲ. ಬಿ.ವೈ.ವಿಜಯೇಂದ್ರ ಕಾರ್ಯವೈಖರಿ ಬಗ್ಗೆ ನನಗೆ ತೃಪ್ತಿ ಇಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷರಾದಾಗ ಎಂಪಿ ಚುನಾವಣೆ ಇತ್ತು. ಮೋದಿ ಪ್ರಧಾನಿ ಆಗಲೆಂದು ಎಲ್ಲ ನುಂಗಿ ಕೆಲಸ ಮಾಡಿದ್ದೇವೆ. ಅದು ಮುಗಿದ ಬಳಿಕ ವರಿಷ್ಠರಿಗೆ ಎಲ್ಲಾ ಹೇಳಿದ್ದೇವೆ ಎಂದು ನೇರವಾಗಿ ರಮೇಶ ಜಾರಕಿಹೊಳಿ ಮಾತನಾಡಿದ್ದು, ಹಲವಾರು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ.