ಐಪಿಎಲ್ 2025ರ ಮೆಗಾ ಹರಾಜಿಗಾಗಿ ಈಗ ಎಲ್ಲ ಫ್ರಾಂಚೈಸಿಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದೇ ತಿಂಗಳಲ್ಲಿ ಮೆಗಾ ಹರಾಜು ಕೂಡ ನಡೆಯಲಿವೆ. ಈ ಮಧ್ಯೆ ಫ್ರಾಂಚೈಸಿಗಳು ಯಾರನ್ನು ಖರೀದಿಸಬೇಕು ಎಂಬ ಚರ್ಚೆ ನಡೆಸುತ್ತಿವೆ. ಈ ಮಧ್ಯೆ ಆರ್ ಸಿಬಿಯ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಸಲಹೆ ನೀಡಿದ್ದಾರೆ.
ಈಗಾಗಲೇ ಎಲ್ಲ ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಬಿಡುಗಡೆ ಮಾಡಿವೆ. ಕೇವಲ ಮೂರು ಆಟಗಾರರನ್ನು ಮಾತ್ರ ಉಳಿಸಿಕೊಂಡಿರುವ ಆರ್ ಸಿಬಿ ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಕಟ್ಟಲು ಮುಂದಾಗಿದೆ. ಒಮ್ಮೆಯೂ ಕಪ್ ಗೆಲ್ಲದ ಆರ್ ಸಿಬಿಗೆ ಬೌಲಿಂಗ್ ದೊಡ್ಡ ಸವಾಲಾಗಿದೆ. ಹೀಗಾಗಿ ಎಬಿಡಿ ಬೌಲಿಂಗ್ ವಿಭಾಗದ ಕುರಿತು ಸಲಹೆ ನೀಡಿದ್ದಾರೆ.
ಆರ್ ಸಿಬಿ ತಂಡಕ್ಕಾಗಿ ಇಬ್ಬರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್ ಗಳ ಹೆಸರನ್ನು ಎಬಿ ಡಿವಿಲಿಯರ್ಸ್ ಶಿಫಾರಸ್ಸು ಮಾಡಿದ್ದಾರೆ. ಕಗಿಸೊ ರಬಾಡ, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಹಾಲ್ ರನ್ನು ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡುವುದು ಯಾವಾಗಲೂ ಕಷ್ಟದ ಕೆಲಸ. ಹೀಗಾಗಿ ಅನುಭವಿ ಆಟಗಾರರ ಅಗತ್ಯವಿದೆ ಎಂದಿರುವ ಎಬಿಡಿ ಭುವನೇಶ್ವರ್ ಕುಮಾರ್ ಹಾಗೂ ಕಗಿಸೊ ರಬಾಡರನ್ನು ಹೆಸರಿಸಿದ್ದಾರೆ. ಅಲ್ಲದೇ, ತಂಡದ ಮಾಜಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ರೊಂದಿಗೆ ಅಶ್ವಿನ್ ಬರಲಿ ಎಂಬುವುದು ಅವರ ವಿಚಾರವಾಗಿದೆ. ಆದರೆ, ಹರಾಜು ಪ್ರಕ್ರಿಯೆಯಲ್ಲಿ ಯಾರು ಸಿಗುತ್ತಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.