ಮುಂಬಯಿ: ಪಾಕ್ ಕ್ರಿಕೆಟ್ ಮಂಡಳಿ ನೇತೃತ್ವದಲ್ಲಿ 2025ರ ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಭಾರತ ತೆರಳುವುದಿಲ್ಲ ಎಂದು ಹೇಳಿದೆ. ಅಲ್ಲದೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಹೊಸ ಷರತ್ತು ಮುಂದಿಟ್ಟಿದೆ.
2025ರ ಫೆಬ್ರವರಿ 19ರಿಂದ ಮಾರ್ಚ್ 9ರ ವರೆಗೆ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy 2025) ಪಾಕ್ ಆತಿಥ್ಯದಲ್ಲಿ ನಡೆಯಲಿದೆ. ಈಗಾಗಲೇ ವೇಳಾಪಟ್ಟಿ ಕೂಡ ಸಿದ್ಧವಾಗಿದೆ. ಲಾಹೋರ್ ನಲ್ಲಿ ಭಾರತದ ಪಂದ್ಯ ನಡೆಸಲು ಯೋಜನೆ ರೂಪಿಸಲಾಗಿದೆ. ಆದರೆ, ಈ ಕುರಿತು ಬಿಸಿಸಿಐ ಪ್ರತಿಕ್ರಿಯೆ ನೀಡಿದ್ದು, ಭಾರತ ತಂಡವು ಪಾಕಿಸ್ತಾನಕ್ಕೆ (Pakistan) ಬರುವುದಿಲ್ಲ. ಆದರೆ, ಭಾರತದ ಎಲ್ಲ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಿದರೆ ಬರಲಿದೆ ಎಂದು ಹೇಳಿದ್ದಾರೆ.
ಆದರೆ, ಭಾರತದ ಮನವಿಯನ್ನು ಪಾಕಿಸ್ತಾನ್ ತಿರಸ್ಕರಿಸಿದೆ ಎಂದು ವರದಿಯಾಗಿದೆ. ಭಾರತಕ್ಕೆ ಭದ್ರತೆಯ ಕೊರತೆ ಇದೆ ಅಂತ ಅನಿಸಿದರೆ, ಲಾಹೋರ್ ನಲ್ಲಿ ಪಂದ್ಯಗಳನ್ನು ಆಡಿದ ನಂತರ ಅದೇ ದಿನ ಭಾರತಕ್ಕೆ ಪ್ರಯಾಣಿಸಬಹುದು. ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಡಲಿದೆ. ಇದರೊಂದಿಗೆ ಭಾರತೀಯ ಅಭಿಮಾನಿಗಳಿಗೆ ವಿಶೇಷ ವೀಸಾ ವ್ಯವಸ್ಥೆ ಮಾಡಲಾಗುವುದು ಎಂದು ಪಾಕ್ ಮಂಡಳಿ ಹೇಳಿದೆ.
ಹಲವಾರು ಯುದ್ಧಗಳು ನಡೆದ ನಂತರವೂ ಭಾರತ ಹಾಗೂ ಪಾಕ್ ನ ಕ್ರೀಡೆ ಮಧ್ಯೆ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ, 2008ರಲ್ಲಿ ನಡೆದ ಮುಂಬಯಿ ದಾಳಿ (Mumbai Attack)ಯ ನಂತರ ಎರಡೂ ರಾಷ್ಟ್ರಗಳ ಕ್ರೀಡೆಯ ಮೇಲೆಯೂ ಪರಿಣಾಮ ಬೀರಿದೆ. ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು.